140ಕ್ಕೂ ಅಧಿಕ ಕಾರುಗಳ ಒಡೆಯ: ಪೊಲೀಸ್‌ ಅಧಿಕಾರಿಯಿಂದ ಹತ್ಯೆಗೀಡಾದ ಒಡಿಶಾ ಸಚಿವರ ಹಿನ್ನೆಲೆ ಏನು?

Update: 2023-01-30 18:00 GMT

ಕೋಲ್ಕತ್ತಾ: ರವಿವಾರ ತಮ್ಮ ಮಾಜಿ ಖಾಸಗಿ ಭದ್ರತಾ ಪಡೆಯ ಅಧಿಕಾರಿಯೊಬ್ಬರಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಒಡಿಶಾ ಸಚಿವ ನಬಾ ಕಿಶೋರ್ ದಾಸ್, ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರವಿವಾರ ತಮ್ಮ ಸ್ವಕ್ಷೇತ್ರ ಝರ್ಸುಗುಂಡಾ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಅವರ ಮೇಲೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಅವರ ಎದೆ ಭಾಗಕ್ಕೆ ಆರು ಸುತ್ತಿನ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಆಡಳಿತಾರೂಢ ಬಿಜು ಜನತಾ ದಳದ ಅತ್ಯಂತ ಹಿರಿಯ ನಾಯಕರಾಗಿ ಹೊರಹೊಮ್ಮಿದ್ದ ನಬಾ ಕಿಶೋರ್ ದಾಸ್, 2019ರಲ್ಲಿ ತಮ್ಮ ಮಾತೃಪಕ್ಷ ಕಾಂಗ್ರೆಸ್ ತೊರೆದು ಬಿಜು ಜನತಾ ದಳ ಸೇರ್ಪಡೆಯಾಗಿದ್ದರು. ಈ ಸಂದರ್ಭದಲ್ಲಿ ಅವರು, ನನ್ನ ಕ್ಷೇತ್ರದ ಮತದಾರರು ನಾನು ಬಿಜು ಜನತಾ ದಳ ಸೇರಬೇಕೆಂದು ಬಯಸುತ್ತಿದ್ದಾರೆ ಎಂದು ಆಗಿನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ತಿಳಿಸಿದ್ದರು ಎನ್ನಲಾಗಿದೆ.

ಈ ಕುರಿತು ಜನವರಿ 16, 2019ರಂದು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದ ಅವರು, "ನನ್ನ ಕ್ಷೇತ್ರದ ಜನ ಮತ್ತು ಮತದಾರರು ನಮ್ಮ ಕ್ಷೇತ್ರ ಅಭಿವೃದ್ಧಿಯಾಗಲು ನಾನು ಬಿಜು ಜನತಾ ದಳ ಸೇರ್ಪಡೆಯಾಗಬೇಕು ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಕೈಜೋಡಿಸಬೇಕು ಎಂದು ಬಯಸುತ್ತಿದ್ದಾರೆ" ಎಂದು ತಿಳಿಸಿದ್ದರು.

ಭಾರತೀಯ ವಿದ್ಯಾರ್ಥಿ ಒಕ್ಕೂಟದ ನಾಯಕರಾಗುವುದರೊಂದಿಗೆ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ನಬಾ ಕಿಶೋರ್ ದಾಸ್, ಒಡಿಶಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವವರೆಗೂ ಬೆಳೆದಿದ್ದರು. ಇದರೊಂದಿಗೆ ನವೀನ್ ಪಟ್ನಾಯಕ್ ಸಂಪುಟದಲ್ಲಿ ಪಟ್ನಾಯಕ್ ಅವರ ನಂಬಿಕಸ್ಥ ಸಚಿವರ ಪೈಕಿ ನಬಾ ಕಿಶೋರ್ ದಾಸ್ ಕೂಡಾ ಒಬ್ಬರಾಗಿದ್ದರು. ಇದಲ್ಲದೆ, ನವೀನ್ ಪಟ್ನಾಯಕ್ ಸರ್ಕಾರದ ಅತ್ಯಂತ ಶ್ರೀಮಂತ ಸಚಿವರಾಗಿದ್ದ ಅವರು, ಸುಮಾರು 140 ಕಾರುಗಳ ಒಡೆಯರಾಗಿದ್ದರು.

ಈವರೆಗೆ ಮೂರು ಬಾರಿ ಶಾಸಕರಾಗಿರುವ ನಬಾ ಕಿಶೋರ್ ದಾಸ್, ಸದ್ಯ ಆಡಳಿತಾರೂಢ ಬಿಜು ಜನತಾದಳ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

Similar News