ವಿಶ್ವಕಪ್ ನಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ ನನ್ನ ವರ್ತನೆ ನನಗಿಷ್ಟವಾಗಿಲ್ಲ: ಲಿಯೊನೆಲ್ ಮೆಸ್ಸಿ

Update: 2023-01-31 08:10 GMT

ಹೊಸದಿಲ್ಲಿ: ಲಿಯೊನೆಲ್ ಮೆಸ್ಸಿ(Lionel Messi) ನೇತೃತ್ವದ ಅರ್ಜೆಂಟೀನ  2022 ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್  ತಂಡವನ್ನು  ಸೋಲಿಸಿ ಫಿಫಾ ವಿಶ್ವಕಪ್ ಅನ್ನು ಗೆದ್ದುಕೊಂಡಿತ್ತು. ತನ್ನ 5 ನೇ ಪ್ರಯತ್ನದಲ್ಲಿ ಮೆಸ್ಸಿ ಮೊದಲ ವಿಶ್ವಕಪ್ ಜಯಿಸಿದರು. ಅರ್ಜೆಂಟೀನದ ದಿಗ್ಗಜ ತನ್ನ  ಪ್ರದರ್ಶನಕ್ಕಾಗಿ ಶ್ಲಾಘನೆಗೆ ಒಳಗಾದರು. ಆದರೆ, ಫೈನಲ್‌ಗೆ ಮುಂಚಿತವಾಗಿ  ನೆದರ್  ಲ್ಯಾಂಡ್ಸ್ ವಿರುದ್ದದ ಕ್ವಾರ್ಟರ್-ಫೈನಲ್ ಹಣಾಹಣಿಯ ನಂತರ ಮೆಸ್ಸಿ ಅವರು ವರ್ತಿಸಿದ ರೀತಿಗೆ ಟೀಕೆಗೆ ಗುರಿಯಾಗಿದ್ದರು.

ಡಚ್ ಬಾಸ್ ಲೂಯಿಸ್ ವ್ಯಾನ್ ಗಾಲ್ ಹಾಗೂ  ಸ್ಟ್ರೈಕರ್ ವೂಟ್ ವೆಘೋರ್ಸ್ಟ್ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದ ಮೆಸ್ಸಿ ಅಂದು ನಾನು ತೋರಿದ್ದ ವರ್ತನೆ ಈಗ ಇಷ್ಟವಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

"ನಾನು ಅದರ ಬಗ್ಗೆ ಯೋಚಿಸಲಿಲ್ಲ, ಅದು ಆ ಕ್ಷಣದಲ್ಲಿ ನಡೆದುಹೋಯಿತು" ಎಂದು ಮೆಸ್ಸಿ ರೇಡಿಯೊ ಶೋ ಪೆರೋಸ್ ಡೆ ಲಾ ಕಾಲ್‌ಗೆ ನೀಡಿದ ಸಂದರ್ಶನದಲ್ಲಿ ವೆಘೋರ್ಸ್ಟ್‌ಗೆ ಸಂಬಂಧಿಸಿದ ಘಟನೆಯ ಕುರಿತು ಮಾತನಾಡುತ್ತಾ ಹೇಳಿದರು.

ತನ್ನ ಬಗ್ಗೆ ನೆದರ್ ಲ್ಯಾಂಡ್ಸ್ ಬಾಸ್ ವ್ಯಾನ್ ಗಾಲ್ ಏನು ಹೇಳಿದ್ದಾರೆಂದು ತನ್ನ ತಂಡದ ಸದಸ್ಯರು ತನಗೆ ತಿಳಿಸಿದ್ದಾರೆ ಎಂದು 7 ಬಾರಿ ಬ್ಯಾಲನ್ ಡಿ'ಓರ್ ವಿಜೇತ ಮೆಸ್ಸಿ ಹೇಳಿದರು.

ಆಟದ ಎಲ್ಲಾ ಒತ್ತಡದ ನಡುವೆ, ಮೆಸ್ಸಿ ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದರು. ಆದರೆ ಆ ರೀತಿ ವರ್ತಿಸಬೇಕೆಂದು  ನಾನು ಯೋಚಿಸಿರಲಿಲ್ಲ ಎಂದರು.

Similar News