ಫಾಝಿಲ್‌ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಸಿಗಲಿದೆ: ಶಾಸಕ ಡಾ. ಭರತ್ ಶೆಟ್ಟಿ

Update: 2023-01-31 14:45 GMT

ಮಂಗಳೂರು, ಜ.31: ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಮೊಹಮ್ಮದ್ ಫಾಝಿಲ್ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಸಿಗಲಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸರಕಾರಕ್ಕೆ ಸಲ್ಲಿಕೆಯಾಗಿರುವ ಪರಿಹಾರ ಲೀಸ್ಟ್‌ನಲ್ಲಿ ಅವರ ಹೆಸರಿದೆ" ಎಂದರು.

ಪ್ರವೀಣ್ ನೆಟ್ಟಾರ್‌ ಕುಟುಂಬಕ್ಕೆ ಪರಿಹಾರ ಸಿಕ್ಕಿದೆ. ಅದೇ ರೀತಿಯಲ್ಲಿ ಫಾಝಿಲ್ ಕುಟುಂಬಕ್ಕೆ ಯಾಕೆ ಸಿಕ್ಕಿಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗ ಶಾಸಕರು ಈ ರೀತಿ ಪ್ರತಿಕ್ರಿಯೆ ನೀಡಿದರು.

"ಹಿಂದೆ ದೀಪಕ್ ರಾವ್ ಹತ್ಯೆ ಆಗಿರುವ ಬೆನ್ನಲ್ಲೆ ಮತ್ತೊಬ್ಬರ ಕೊಲೆಯಾಯಿತು. ಆಗ ನಮ್ಮ ಒಬ್ಬರು ಲೀಡರ್ ಹೋಗಿದ್ದರು. ಆಗ ಅವರಿಗೆ ಘೆರಾವ್ ಆಗಿತ್ತು. ಈ ಕಾರಣದಿಂದಾಗಿ ಫಾಝಿಲ್ ಹತ್ಯೆಯಾದಾಗ ಅವರ ಮನೆಗೆ ನಾನು ಹೋಗಿಲ್ಲ" ಎಂದು ಹೇಳಿದರು.

"ಹಿಂದಿನ ಘಟನೆ ಬಿಡಿ. ನೀವು ಮಾದರಿಯಾಗಬೇಕಿತ್ತು ಎಂದು ಸುದ್ದಿಗಾರರು ಹೇಳಿದಾಗ, ಖಂಡಿತ ಅವರ ಮನೆಗೆ ಹೋಗುತ್ತಿದ್ದೆ. ಆದರೆ ನನ್ನಿಂದಾಗಿ ಗಲಾಟೆ ಆಗಬಾರದು ಎನ್ನುವುದು ಉದ್ದೇಶವಾಗಿತ್ತು. ನಾನು ಹೋದರೆ ನನ್ನ ಮೇಲೆ ದಾಳಿ ನಡೆಯುತ್ತದೆ. ಅದಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬ ಸುದ್ದಿ ಬಂದಿತ್ತು. ಈ ಕಾರಣದಿಂದಾಗಿ ಆಗ ನನಗೆ ಹೋಗಲು ಸಾಧ್ಯವಾಗಿಲ್ಲ" ಎಂದು ಜಾರಿಕೊಂಡರು.

ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿ ನಮ್ಮ ಹುಡುಗರು ಫಾಝಿಲ್ ಹತ್ಯೆಯನ್ನು ಮಾಡಿದ್ದಾರೆ ಎನ್ನುವ ಶರಣ್ ಪಂಪ್‌ವೆಲ್ ಹೇಳಿಕೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, "ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದನ್ನು ನಾನು ಕೇಳಿಲ್ಲ. ಕೇಳಲು ಟೈಮ್ ಸಿಕ್ಕಿಲ್ಲ. ನಾನು ಕೂಡಾ ಆ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ ಹೋಗಲು ಸಾಧ್ಯವಾಗಿಲ್ಲ ಎಂದರು.

Similar News