ಅಮೆರಿಕಾದ ಕಳಪೆ ಗುಪ್ತಚರರಿಗಿಂತ ರಷ್ಯಾ ಅಧ್ಯಕ್ಷ ಪುಟಿನ್ ರನ್ನೇ ಹೆಚ್ಚು ನಂಬುತ್ತೇನೆ ಎಂದ ಡೊನಾಲ್ಡ್ ಟ್ರಂಪ್

Update: 2023-01-31 13:07 GMT

ವಾಷಿಂಗ್ಟನ್: ತಾನು ಅಮೆರಿಕಾ ಗುಪ್ತಚರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಳಪೆ ಗುಪ್ತಚರರಿಗಿಂತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರನ್ನೇ ಹೆಚ್ಚು ನಂಬುತ್ತೇನೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪುನರುಚ್ಚರಿಸಿದ್ದಾರೆ.

2018ರಲ್ಲಿ ವ್ಲಾದಿಮಿರ್ ಪುಟಿನ್ ಪಕ್ಕ ನಿಂತು ಡೊನಾಲ್ಡ್ ಟ್ರಂಪ್ ಇದೇ ಮಾತನ್ನು ಹೇಳಿದ್ದರು. ಈ ಮಾತಿಗೆ ಅವರ ಸ್ವಪಕ್ಷೀಯರಾದ ರಿಪಬ್ಲಿಕನ್ನರು ಹಾಗೂ ಡೆಮೋಕ್ರಾಟ್ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ತಾವೇ ನಿರ್ದೇಶಕರಾಗಿದ್ದ ರಾಷ್ಟ್ರೀಯ ಗುಪ್ತಚರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಪ್ತಚರ ಸಮುದಾಯವನ್ನು ರಷ್ಯಾ ಅಧ್ಯಕ್ಷರ ಎದುರಿಗೇ ಹೀಗಳೆದದ್ದನ್ನು ಖಂಡಿಸಿದ್ದವು.

ಆದರೆ, ತನ್ನ ವಿರುದ್ಧ ಕೇಳಿ ಬಂದಿದ್ದ ಟೀಕೆಗಳಿಂದ ಅವರು ಒಂದಿನಿತೂ ಬದಲಾಗಿಲ್ಲ ಎಂಬುದನ್ನು ಅವರು ಸೋಮವಾರ ಮತ್ತೆ ದೃಢಪಡಿಸಿದ್ದಾರೆ. CIA, NSA, FBI ಮತ್ತು ಸೈಬರ್ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು ಅವರು ಮತ್ತೊಮ್ಮೆ 'ಕಳಪೆ ವ್ಯಕ್ತಿಗಳು' ಎಂದು ಟೀಕಿಸಿದ್ದಾರೆ ಎಂದು The Independent ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇ ಕುರಿತು Truth Social ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್‌ ಟ್ರಂಪ್, "ಹೆಲ್ಸಿಂಕಿಯಲ್ಲಿ ಮೂರನೆ ದರ್ಜೆಯ ವರದಿಗಾರನೊಬ್ಬ ನೀವು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ನಂಬುತ್ತೀರೊ ಅಥವಾ ನಮ್ಮ ಗುಪ್ತಚರ ವಿಭಾಗದವರನ್ನೊ? (ಕಳಪೆ ಜೀವಿಗಳು?)" ಎಂದು ನನ್ನನ್ನು ಪ್ರಶ್ನಿಸಿದ್ದು ನೆನಪಾಗುತ್ತಿದೆ" ಎಂದು ಪರೋಕ್ಷವಾಗಿ ಅಮೆರಿಕಾ ಗುಪ್ತಚರ ಸಿಬ್ಬಂದಿಗಳನ್ನು ಲೇವಡಿ ಮಾಡಿದ್ದಾರೆ.

ಮುಂದುವರಿದು, "ಆ ಸಂದರ್ಭದಲ್ಲಿ ನನ್ನ ಉದ್ದೇಶವು ನಾವು ಖಂಡಿತ ಜೇಮ್ಸ್ ಕಾಮಿ, ಮ್ಯಾಕ್‌ಕೇಬ್ (ನೀಚ ಹಿಲರಿ ತನಿಖೆಗೊಳಗಾಗುವಾಗ ಆತನ ಪತ್ನಿಗೆ ಆಕೆ ನೆರವು ಒದಗಿಸಿದ್ದಳು), ಬ್ರೆನ್ನಾನ್, ಪೀಟರ್ ಸ್ಟ್ರಾಕ್ಸ್ (ಎಸ್ಇಸಿಯಲ್ಲಿರುವ ವ್ಯಕ್ತಿಯ ಪತಿ) ಮತ್ತು ಆತನ ಪ್ರೇಯಸಿ, ಲೀಸಾ ಪೇಜ್‌ರಂಥ ಕೆಟ್ಟ ವ್ಯಕ್ತಿಗಳನ್ನು ಹೊಂದಿದ್ದೇವೆ ಎಂದಾಗಿತ್ತು. ಈಗ ಆ ಪಟ್ಟಿಗೆ ಮ್ಯಾಕ್‌ಗೋನಿಯಲ್ ಹಾಗೂ ಮತ್ತಿತರ ನೀಚರನ್ನು ಸೇರಿಸಿಕೊಳ್ಳಿ‌. ಈ ಪೈಕಿ ನೀವು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಪುಟಿನ್ ಅಥವಾ ಈ ಅನರ್ಹರನ್ನ?" ಎಂದು ಕಿಡಿ ಕಾರಿದ್ದಾರೆ.

ಅಮೆರಿಕಾ ಅಧ್ಯಕ್ಷರಾಗಿದ್ದಾಗ ಮತ್ತು ಶ್ವೇತಭವನ ತೊರೆದ ನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪರ ವಹಿಸುತ್ತಿರುವ ಡೊನಾಲ್ಡ್ ಡ್ರಂಪ್ ನಡೆಯು ಪದೇ ಪದೇ ಟೀಕೆಗೊಳಗಾಗುತ್ತಿದೆ.

ಇದನ್ನೂ ಓದಿ: ಗೂಗಲ್‌ 12,000 ಸಿಬ್ಬಂದಿಗಳನ್ನು ವಜಾಗೊಳಿಸುವ ವಾರದ ಮುಂಚೆ CEO ಸುಂದರ್‌ ಪಿಚೈ ವೇತನದಲ್ಲಿ ಭಾರೀ ಏರಿಕೆ: ವರದಿ

Similar News