ಹಸಿರು ವಲಯ ನಿರ್ಮಾಣ, ಉದ್ಯೋಗಕ್ಕೆ ಆಗ್ರಹ: ಫೆ.5ರಂದು MRPL ವಿರುದ್ಧ 'ಮನೆಮನೆ ಪ್ರತಿಭಟನೆ'

Update: 2023-02-01 08:14 GMT

ಮಂಗಳೂರು, ಫೆ.1: ಎಂಆರ್ ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದಲ್ಲಿ ಕಡಿಮೆ ಬಿದ್ದಿರುವ 27 ಎಕರೆ  ಹಸಿರು ವಲಯ ನಿರ್ಮಿಸಲು, ಕಂಪೆನಿಯ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಕಲ್ಪಿಸಲು, ಸುತ್ತಲ ಗ್ರಾಮಗಳಲ್ಲಿ ಉಂಟಾಗಿರುವ ಕೈಗಾರಿಕಾ  ಮಾಲಿನ್ಯ ತಡೆಯಲು ದೃಢವಾದ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ, ಎಂಆರ್ ಪಿಎಲ್(MRPL) ಕಂಪೆನಿ ವಿರುದ್ಧ ಫೆ.5ರಂದು ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಗಳಲ್ಲಿ 'ಮನೆ ಮನೆ ಪ್ರತಿಭಟನೆ' ನಡೆಸಲಾಗುವುದು ಎಂದು ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ ತಿಳಿಸಿದೆ‌.

ಗ್ರಾಮದ ಜನವಸತಿಗೆ ತಾಗಿಕೊಂಡು, ಹಸಿರು ವಲಯ ನಿರ್ಮಿಸದೆ ಅಪಾಯಕಾರಿ ಕೋಕ್ ಸಲ್ಫರ್ ಘಟಕ ಸ್ಥಾಪಿಸಿರುವುದರಿಂದ ಸುತ್ತಲ ಗ್ರಾಮಗಳಲ್ಲಿ ಅಸಹನೀಯ ಪರಿಸ್ಥಿತಿ ಉಂಟಾಗಿದೆ. ಗ್ರಾಮಸ್ಥರು ರೋಗ ರುಜಿನಗಳಿಂದ ಬಳಲುತ್ತಿದ್ದಾರೆ. ಅಂತರ್ಜಲ ಹಾಳಾಗಿ ಬಾವಿಗಳ ನೀರು ಬಳಕೆಗೆ ಅಯೋಗ್ಯವಾಗಿವೆ. ಶಬ್ದ, ವಾಯು ಮಾಲಿನ್ಯಗಳು ವಿಪರೀತವಾಗಿವೆ. ಇಂತಹ ಅಸಹನೀಯ ಮಾಲಿನ್ಯದ ವಿರುದ್ಧ 2015, 16ನೇ ಇಸವಿಯಲ್ಲಿ ಗ್ರಾಮಸ್ಥರು ತೀವ್ರ ರೀತಿಯ ಹೋರಾಟ ಸಂಘಟಿಸಿದ್ದರು. ಅದರ ಪರಿಣಾಮ ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ಕ್ರಮಗಳನ್ನು ಕಾಲಮಿತಿಯಲ್ಲಿ ನಡೆಸಲು ಕಂಪೆನಿಗೆ ಆದೇಶಿಸಿತ್ತು. ಆರು ಅಂಶಗಳಲ್ಲಿ ಐದು ಅಂಶಗಳನ್ನು ಅರಬರೆಯಾಗಿ ಕಂಪೆನಿ ಜಾರಿಗೊಳಿಸಿದೆ. ಆದರೂ ಮಾಲಿನ್ಯದ ಪ್ರಮಾಣ ಕಡಿಮೆಯಾಗಿಲ್ಲ. ಆರು ಅಂಶಗಳಲ್ಲಿ ಪ್ರಧಾನವಾಗಿರುವ ಜನವಸತಿ ಭಾಗದಲ್ಲಿ 27 ಎಕರೆ ಹಸಿರು ವಲಯ ನಿರ್ಮಾಣವನ್ನು ಜಮೀನು ಗುರುತಿಸಿ ವರ್ಷಗಳು ದಾಟಿದರೂ ಆದೇಶವನ್ನು ಕಂಪೆನಿ ಜಾರಿಗೊಳಿಸದೆ ತಪ್ಪಿಸಿಕೊಳ್ಳುತ್ತಿದೆ. ಅದಲ್ಲದೆ ಕಂಪೆನಿಯ ನೇಮಕಾತಿಯಲ್ಲಿ ಸ್ಥಳೀಯರನ್ನು ಪೂರ್ತಿಯಾಗಿ ಹೊರಗಿಡಲಾಗುತ್ತಿದೆ ಎಂದು ಹೋರಾಟ ಸಮಿತಿ ದೂರಿದೆ.

ಎಂಅರ್ ಪಿಎಲ್ ಕಂಪೆನಿಯ ಇಂತಹ ಪರಿಸರ ವಿರೋಧಿ, ಸ್ಥಳೀಯರೊಂದಿಗಿನ ತಾರತಮ್ಯ, ದುರ್ವರ್ತನೆ ನೀತಿಯನ್ನು ಖಂಡಿಸಿ, ಹಸಿರು ವಲಯ ನಿರ್ಮಾಣ, ಮಾಲಿನ್ಯ ತಡೆಗಟ್ಟುವ ಆದೇಶದ ತಕ್ಷಣ ಜಾರಿಗೆ ಒತ್ತಾಯಿಸಿ, ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಾಗರಿಕ ಹೋರಾಟ ಸಮಿತಿ ನಿರ್ಧರಿಸಿದೆ.. ಅದರಂತೆ ಫೆ.5ರಂದು ಸುತ್ತಲ ಗ್ರಾಮಗಳಲ್ಲಿ ಮನೆಮನೆಗಳಲ್ಲಿ ಕುಟುಂಬ ಸಮೇತ ಪ್ರತಿಭಟನೆ ನಡೆಸಿ ಕಂಪೆನಿಗೆ ಪ್ರಬಲ ಎಚ್ಚರಿಕೆ ನೀಡಲಾಗುವುದು ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News