ಉಡುಪಿ: ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ

Update: 2023-02-01 11:10 GMT

ಉಡುಪಿ: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಪೌರ ಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೊಳಪಡಿಸಿ ಹಂತಹಂತವಾಗಿ ಖಾಯಂಗೊಳಿಸುವಂತೆ ಆಗ್ರಹಿಸಿ ಕಸ ಸಾಗಿಸುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಲೋಡರ್ಸ್‌, ಕ್ಲೀನರ್ಸ್, ಹೆಲ್ಪರ್ಸ್, ಒಳಚರಂಡಿ ಕಾರ್ಮಿಕರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ, ಕಾಪು ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗಳಲ್ಲಿ ದುಡಿಯುತ್ತಿರುವ ಒಟ್ಟು 220 ಮಂದಿ ಹೊರಗುತ್ತಿಗೆ ನೌಕರರು, ಕುಡಿಯುವ ನೀರು ಹಾಗೂ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಗ್ಗೆಯಿಂದ ಸಂಜೆಯ ವರೆಗೆ ಧರಣಿ ನಡೆಸಿದರು.

ಧರಯನ್ನುದ್ದೇಶಿಸಿ ಮಾತನಾಡಿದ ಸಂಘದ ಉಡುಪಿ ಜಿಲ್ಲಾಧ್ಯಕ್ಷ ವಿನಯ ಕುಮಾರ್ ಮಾರ್ಪಳ್ಳಿ ಮಾತನಾಡಿ, ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಮುಂದಾಗಿರುವ ಸರಕಾರ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ ನೌಕಕರನ್ನು ನಿರ್ಲಕ್ಷ್ಯ ಮಾಡಿ ತಾರತಮ್ಯ ಎಸಗಿದೆ. ಸರಕಾರದ ನೀತಿ ಒಂದು ಕ್ಣಗೆ ಸುಣ್ಣ ಒಂದು ಕ್ಣಗೆ ಬೆಣ್ಣೆ ಎಂಬತಾಗಿದೆ. ನೇರ ಪಾವತಿ ಹಾಗೂ ನೇರ ನೇಮಕಾತಿಗಾಗಿ ನಾವು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸರಕಾರ ಸ್ಪಂದಿಸಿಲ್ಲ. ಈ ಬಾರಿ ನಮಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸಲಾಗುವುದು. ನಾಳೆಯೂ ಧರ ಮುಂದುವರೆಯಲಿದೆ ಎಂದು ತಿಳಿಸಿದರು.

ಧರಣಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ಪೂಜಾರಿ, ಕೋಶಾಧಿಕಾರಿ ಸುದೀಪ್, ಕುಂದಾಪುರದ ಪ್ರಭಾಕರ್, ಸಾಲಿಗ್ರಾಮದ ವಿಕ್ಟರ್, ಕಾರ್ಕಳದ ಕೆ.ರವಿ, ನಿರಂಜನ, ಪ್ರಸಾದ ಕೊರಗ, ಪ್ರಿಯತಮ, ಮಂಜುನಾಥ್, ಹಿರಿಯ ಚಾಲಕ ರವೀಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Similar News