ನಾವು ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದ್ದೇವೆ: ಬಾಂಬ್‌ ಸ್ಫೋಟದ ಬಗ್ಗೆ ಪಾಕ್ ಸಚಿವರ ಪ್ರತಿಕ್ರಿಯೆ

"ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಒಗ್ಗೂಡಿ ನಿಲ್ಲಬೇಕಿದೆ"

Update: 2023-02-01 14:51 GMT

ಇಸ್ಲಮಾಬಾದ್, ಫೆ.1: ಭಯೋತ್ಪಾದನೆಯ ಬೀಜವನ್ನು ತಮ್ಮ ದೇಶವೇ ಬಿತ್ತಿದ್ದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್(Khawaja Asif) ಹೇಳಿರುವುದಾಗಿ `ಡಾನ್' ವರದಿ ಮಾಡಿದೆ.ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನಲ್ಲಿ ಪೇಷಾವರ ಆತ್ಮಾಹುತಿ ಬಾಂಬ್ ದಾಳಿಯ ಬಗ್ಗೆ ಮಾಹಿತಿ ನೀಡಿದ ಅವರು ` ಈ ವಿಷಯದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ. ಆದರೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಮೊದಲಿಗೆ ನಾವೇ ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದ್ದೇವೆ.

‌"ಮಸೀದಿಯ ಆವರಣದಲ್ಲಿ ತನ್ನನ್ನು ಸ್ಫೋಟಿಸಿಕೊಂಡ ಬಾಂಬರ್ , ಮಧ್ಯಾಹ್ನದ ಪ್ರಾರ್ಥನೆಯ ಸಂದರ್ಭ ಮೊದಲ ಸಾಲಿನಲ್ಲಿ ನಿಂತಿದ್ದ. ಪ್ರಾರ್ಥನೆಯ ಸಂದರ್ಭ ಆರಾಧಕರನ್ನು ಭಾರತದಲ್ಲಿ ಅಥವಾ ಇಸ್ರೇಲ್ನಲ್ಲೂ ಕೊಲ್ಲಲಾಗುತ್ತಿಲ್ಲ. ಆದರೆ ಇದು ಪಾಕಿಸ್ತಾನದಲ್ಲಿ ಘಟಿಸಿದೆ. ಭಯೋತ್ಪಾದನೆಯ ವಿರುದ್ಧ ಇಡೀ ದೇಶ ಒಗ್ಗೂಡಿ ನಿಂತರೆ ಮಾತ್ರ ಅದರ ವಿರುದ್ಧದ ಹೋರಾಟ ಯಶಸ್ವಿಯಾಗಲು ಸಾಧ್ಯ. ಭಯೋತ್ಪಾದನೆಯು ಯಾವುದೇ ಧರ್ಮ ಮತ್ತು ಪಂಥದ ನಡುವೆ ವ್ಯತ್ಯಾಸವನ್ನು ಗಮನಿಸುವುದಿಲ್ಲ. ಆದರೆ ಧರ್ಮದ ವಿಷಯದಲ್ಲಿ ಅಮೂಲ್ಯ ಜೀವಗಳನ್ನು ಹತ್ಯೆ ಮಾಡಲು ಭಯೋತ್ಪಾದನೆಯನ್ನು ಬಳಸಲಾಗುತ್ತದೆ' ಎಂದು ಹೇಳಿದರು.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಒಗ್ಗೂಡಿ ನಿಲ್ಲಬೇಕಿದೆ. ತನ್ನ ಮನೆಯನ್ನು ಸುಸ್ಥಿತಿಯಲ್ಲಿಡಲು ಪಾಕಿಸ್ತಾನಕ್ಕೆ ಇದು ಸಕಾಲವಾಗಿದೆ ಎಂದವರು ಹೇಳಿದ್ದಾರೆ. ಈ ಹಿಂದೆ ಅಫ್ಘಾನ್ನ ಮೇಲೆ ರಶ್ಯ ಆಕ್ರಮಣ ನಡೆಸಿದಾಗ ಪಾಕಿಸ್ತಾನವು ತನ್ನ ಸೇವೆಗಳನ್ನು ಅಮೆರಿಕಕ್ಕೆ  ಬಾಡಿಗೆಗೆ ನೀಡಿತು. ಈ ಒಪ್ಪಂದ ಸುಮಾರು 8ರಿಂದ 10 ವರ್ಷ ಮುಂದುವರಿಯಿತು. ಆ ಬಳಿಕ ಅಮೆರಿಕ ಸೇನೆ ಸ್ವದೇಶಕ್ಕೆ ಮರಳಿ ರಶ್ಯವನ್ನು ಸೋಲಿಸಿದೆವು ಎಂದು ಸಂಭ್ರಮಾಚರಿಸಿತು. ಅದರ ಪರಿಣಾಮವನ್ನು ಪಾಕಿಸ್ತಾನ ಮುಂದಿನ 10 ವರ್ಷ ಅನುಭವಿಸುವಂತಾಯಿತು .

ಆ 10 ವರ್ಷ ಕಳೆದಾದ ಮೇಲೆ, 9/11 ದಾಳಿ ಪ್ರಕರಣ ನಡೆಯಿತು. ಅಲ್ಲಿಂದ ಬೆದರಿಕೆ ಎದುರಾಯಿತು ಮತ್ತು ನಾವು ಮತ್ತೊಂದು ಯುದ್ಧದಲ್ಲಿ ಒಳಗೊಳ್ಳುವಂತಾಯಿತು. ಈ ಎರಡು ಯುದ್ಧಗಳಲ್ಲಿ ಪಾಕಿಸ್ತಾನದ ಒಳಗೊಳ್ಳುವಿಕೆಯು ನಮ್ಮ ಮನೆ, ಮಾರುಕಟ್ಟೆ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹರಡಿತು ಎಂದವರು ಹೇಳಿದ್ದಾರೆ.

ಈ ಮಧ್ಯೆ, ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ತಲುಪಿದ್ದು 170 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬುಧವಾರ ಮಾಧ್ಯಮಗಳು ವರದಿ ಮಾಡಿವೆ.

Similar News