ಗಂಗೊಳ್ಳಿ: ಸ್ಕೀಮ್ ಹೆಸರಿನಲ್ಲಿ ಹಣ ಸಂಗ್ರಹಿಸಿ ಕೋಟ್ಯಂತರ ರೂ. ವಂಚನೆ; ಪ್ರಕರಣ ದಾಖಲು

Update: 2023-02-01 15:51 GMT

ಗಂಗೊಳ್ಳಿ: ಹಣ ಸಂಗ್ರಹಿಸುವ ಸ್ಕೀಮ್ ಹೆಸರಿನಲ್ಲಿ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದ್ಮಾ ಹೆಗ್ಡೆ ಹಾಗೂ ಮೂಕಾಂಬು ಸೇರಿ ಆರಂಭಿಸಿದ ಪದ್ಮ ರೋಯಲ್ ಚಾಲೆಂಜ್ ಸ್ಕೀಮ್ ಉದ್ಯಮದಲ್ಲಿ ಕುಂದಬಾರಂದಾಡಿಯ ರತ್ನ ಎಂಬವರನ್ನು ಸದಸ್ಯರನ್ನಾಗಿ ಮಾಡಿದ್ದು, ಅವರಿಗೆ ಹೆಚ್ಚಿನ ಸಂಬಳದ ಆಸೆ ತೋರಿಸಿ ಗ್ರಾಹಕರಿಂದ ಹೆಚ್ಚಿನ ಲಾಭ ನೀಡುವುದಾಗಿ ಹೇಳಿ ಹಣ ಸಂಗ್ರಹಿಸುವಂತೆ ಸೂಚಿಸಲಾಗಿತ್ತು. ಅದರಂತೆ ರತ್ನ ಒಟ್ಟು 131 ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದು ಇವರಿಂದ ಸಂಗ್ರಹಿಸಿದ ಹಣವನ್ನು ಬಗ್ವಾಡಿಯಲ್ಲಿರುವ ಪದ್ಮಾ ಹೆಗ್ಡೆ ಅವರ ಕಛೇರಿಯಲ್ಲಿ ನೀಡುತ್ತಿದ್ದರೆನ್ನಲಾಗಿದೆ.

ಅಲ್ಲದೆ ಸಂಸ್ಥೆಗೆ ಗ್ರಾಹಕರಿಂದ ಹಣ ಡೆಪಾಸಿಟ್ ಇರಿಸಿಕೊಂಡು ಅವರಿಗೆ ಕರಾರು ಪತ್ರ ನೀಡಲಾಗಿತ್ತು. ಡೆಪಾಸಿಟ್ ಹಣವಾಗಿ ಹಲವು ಮಂದಿಯಿಂದ ಒಟ್ಟು 1,07,60,615 ರೂ. ಸಂಗ್ರಹಿಸಲಾಗಿತ್ತು. ಅಲ್ಲದೆ ಪದ್ಮಾ ಹೆಗ್ಡೆ ಕುಂದಬಾ ರಂದಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 5 ವರ್ಷಗಳವರೆಗೆ ದತ್ತು ಪಡೆದು 6 ಜನ ಗೌರವ ಶಿಕ್ಷಕಿಯರನ್ನು ಹಾಗೂ ಇಬ್ಬರು ಆಯಾರನ್ನು ನೇಮಿಸಿ ಸಂಬಳ ಕೊಡುವುದಾಗಿ ಹೇಳಿದ್ದರು. ಇದು ಯಾವುದನ್ನು ಮಾಡದೆ ನಂಬಿಸಿ ಮೋಸ ಮಾಡಿದ್ದಾರೆ. ಅಲ್ಲದೆ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಹಿಂದಿರುಗಿಸಬೇಕಾದ ಹಣವನ್ನು ನೀಡದೇ ಕಛೇರಿಗಳನ್ನು ಬಂದ್ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ. 

Similar News