ಬಜೆಟ್ ನಲ್ಲಿ ಜಮ್ಮು-ಕಾಶ್ಮೀರಕ್ಕೆ 35,581.44 ಕೋ.ರೂ.

Update: 2023-02-01 17:33 GMT

ಹೊಸದಿಲ್ಲಿ,ಫೆ.1: ಬುಧವಾರ ಸಂಸತ್ತಿನಲ್ಲಿ ಮಂಡಿಸಲಾದ 2023-24ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ 35,581.44 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದರ ಬಹುಪಾಲು ಜಮ್ಮು-ಕಾಶ್ಮೀರಕ್ಕೆ ಕೇಂದ್ರದ ನೆರವಿನ ರೂಪದಲ್ಲಿರುತ್ತದೆ.

ಇತರ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು(5,987.14 ಕೋ.ರೂ.),ಚಂಡಿಗಡ (5,436.10 ಕೋ.ರೂ.),ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು (2,475 ಕೋ.ರೂ.), ಲಡಾಖ್(5,958 ಕೋ.ರೂ.),ಲಕ್ಷದ್ವೀಪ (1,394.75 ಕೋ.ರೂ.),ಪುದುಚೇರಿ (3,117.77 ಕೋ.ರೂ.) ಮತ್ತು ದಿಲ್ಲಿ (1,168.01 ಕೋ.ರೂ.) ಕೂಡ ಬಜೆಟ್ನಲ್ಲಿ ತಮ್ಮ ಪಾಲುಗಳನ್ನು ಪಡೆದಿವೆ.ಬಜೆಟ್ ದಾಖಲೆಗಳಂತೆ ಜಮ್ಮು-ಕಾಶ್ಮೀರಕ್ಕೆ 35,581.44 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು,ಇದರಲ್ಲಿ 33,923 ಕೋ.ರೂ.ಕೇಂದ್ರದ ನೆರವಾಗಿದೆ. ಈ ಹಂಚಿಕೆಯು ಪ್ರಸಕ್ತ ಹಣಕಾಸು ವರ್ಷದ 44,538.13 ಕೋ.ರೂ.ಗಳ ಪರಿಷ್ಕೃತ ಅಂದಾಜಿಗಿಂತ ಗಣನೀಯವಾಗಿ ಕಡಿಮೆಯಾಗಿದೆ.

ಜಮ್ಮು-ಕಾಶ್ಮೀರಕ್ಕೆ ಕೇಂದ್ರದ ನೆರವು ಸಂಪನ್ಮೂಲ ಅಂತರವನ್ನು ತುಂಬಿಕೊಳ್ಳುವ ಮತ್ತು 9,486.13 ಕೋ.ರೂ.ಗಳ ವಿಶೇಷ ವಿತ್ತೀಯ ಬೆಂಬಲವಾಗಿದೆ. ಜಮ್ಮು-ಕಾಶ್ಮೀರ ಸರಕಾರವು ಈ ಹಣವನ್ನು ನೈಸರ್ಗಿಕ ವಿಕೋಪಗಳನ್ನು ಶಮನಿಸಲು, 2014ರ ಪ್ರವಾಹಗಳಿಂದಾಗಿ ಹಾನಿಗೀಡಾಗಿದ್ದ ಮೂಲಸೌಕರ್ಯಗಳ ಕಾಯಂ ಮರುಸ್ಥಾಪನೆಯಿಂದಾಗಿ ಉಂಟಾಗಿದ್ದ ವೆಚ್ಚಗಳನ್ನು ಭರಿಸಲು, ಶ್ರೀನಗರದಲ್ಲಿಯ ದಾಲ್ ಸರೋವರದ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ವೆಚ್ಚ ಮಾಡಬೇಕಾಗುತ್ತದೆ.

ಬಜೆಟ್ ಹಂಚಿಕೆಯನ್ನು 624 ಮೆ.ವ್ಯಾ.ಸಾಮರ್ಥ್ಯದ ಕೈರು,800 ಮೆ.ವ್ಯಾ.ಸಾಮರ್ಥ್ಯದ ರಾಟ್ಲೆ ಮತ್ತು 540 ಮೆ.ವ್ಯಾ.ಸಾಮಥ್ಯದ ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಈಕ್ವಿಟಿ ದೇಣಿಗೆಯಾಗಿ, ಝೇಲಂ ತಾವಿ ನೆರೆ ಚೇತರಿಕೆ ಯೋಜನೆಗಾಗಿ ಹಾಗೂ ಜಮ್ಮು-ಕಾಶ್ಮೀರದಲ್ಲಿಯ ಮೂಲಸೌಕರ್ಯ ಯೋಜನೆಗಳಿಗೆ ಸಂಪನ್ಮೂಲ ಅಂತರವನ್ನು ನೀಗಿಸಲು ಸಹ ವೆಚ್ಚ ಮಾಡಲಾಗುವುದು.

Similar News