ಬಳಕೆದಾರರ ಹೆಸರು, ಮೊಬೈಲ್ ಸಂಖ್ಯೆ ಹೊರತುಪಡಿಸಿ ಬೇರೆ ಯಾವ ಡಾಟಾಗಳೂ ನಮ್ಮ ಬಳಿಯಿಲ್ಲ: ಸುಪ್ರೀಂಗೆ ವಾಟ್ಸ್ ಆ್ಯಪ್

Update: 2023-02-02 09:20 GMT

ಹೊಸದಿಲ್ಲಿ: ಕಂಪನಿಯ ನೀತಿ ಅನ್ವಯ ತಾನು ಬಳಕೆದಾರರ ಯಾವುದೇ ಸೂಕ್ಷ್ಮ ವೈಯಕ್ತಿಕ ದತ್ತಾಂಶಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ವಾಟ್ಸ್ ಆ್ಯಪ್ (WhatsApp)  ಬುಧವಾರ ಸುಪ್ರೀಂಕೋರ್ಟ್‌ಗೆ (Supreme Court) ತಿಳಿಸಿದೆ ಎಂದು livelaw.in ವರದಿ ಮಾಡಿದೆ.

2016ರಲ್ಲಿ ವಾಟ್ಸ್ ಆ್ಯಪ್ ಜಾರಿಗೊಳಿಸಿರುವ ಖಾಸಗಿ ಭದ್ರತಾ ನೀತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾ. ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ್ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠ ನಡೆಸುತ್ತಿದೆ. ಈ ಪ್ರಕರಣವನ್ನು 2017ರಲ್ಲಿ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿತ್ತು.

ಕಳೆದ ಬಾರಿಯ ವಿಚಾರಣೆ ಸಂದರ್ಭದಲ್ಲಿ 2023ರ ಬಜೆಟ್ ಅಧಿವೇಶನದ ಎರಡನೆ ಅವಧಿಯಲ್ಲಿ ದತ್ತಾಂಶ ಸುರಕ್ಷತೆ ಮಸೂದೆಯನ್ನು ಮಂಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠವು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕೇಂದ್ರ ಸರ್ಕಾರ ಮತ್ತು ವಾಟ್ಸ್ ಆ್ಯಪ್ ಸಂಸ್ಥೆಗಳು ಅರ್ಜಿಗಳ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದವು. ಹಿರಿಯ ವಕೀಲರ ವಿಸ್ತೃತ ವಾದವನ್ನು ಆಲಿಸಿದ ನ್ಯಾಯಪೀಠವು, ಅರ್ಜಿದಾರರು ವಿಚಾರಣೆ ಮುಂದುವರಿಸಲು ಬಯಸುತ್ತಾರೊ ಇಲ್ಲವೊ ಎಂಬ ಸಂಗತಿಯನ್ನು ತಿಳಿದುಕೊಳ್ಳಲು ಬಯಸುತ್ತೇವೆ ಎಂಬ ಸೂಚನೆ ನೀಡಿತು.

ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವ್ಯಕ್ತಪಡಿಸಿದ್ದ ಆತಂಕವನ್ನೇ ಬುಧವಾರ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಕೂಡಾ ವ್ಯಕ್ತಪಡಿಸಿದರು. ದತ್ತಾಂಶ ಸುರಕ್ಷತಾ ಕಾಯ್ದೆಗೆ ನ್ಯಾಯಾಲಯವು ಒತ್ತಡ ಹೇರುವುದರಿಂದ ಸದನದಲ್ಲಿ ಏಕಪಕ್ಷೀಯ ಚರ್ಚೆಗೆ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು. ಬಜೆಟ್‌ ಅಧಿವೇಶನದ ಎರಡನೆ ಅವಧಿಯಲ್ಲಿ, ಅಂದರೆ ಮಾರ್ಚ್, 2023 ಮತ್ತು ಏಪ್ರಿಲ್, 2023ರ ನಡುವೆ ಮಂಡನೆಯಾಗಬೇಕಿರುವ ದತ್ತಾಂಶ ಸುರಕ್ಷತಾ ಮಸೂದೆಯು ಅದಕ್ಕೂ ಮುನ್ನ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಿದೆ. ಅಲ್ಲಿಯವರೆಗೆ ವಿಚಾರಣೆಯನ್ನು ಮುಂದೂಡಬೇಕು ಎಂದು ಅವರು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸಾಲಿಸಿಟರ್ ಜನರಲ್ ಹಾಗೂ ಅಟಾರ್ನಿ ಜನರಲ್ ಅವರ ಪ್ರತಿಪಾದನೆಯನ್ನು ವಾಟ್ಸ್ ಆ್ಯಪ್ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಕೂಡಾ ಬೆಂಬಲಿಸಿದರು.

ಪ್ರತಿವಾದಿಗಳು ವಿಚಾರಣೆಯನ್ನು ಮುಂದುವರಿಸುವುದರಿಂದ ತೊಂದರೆ ಉದ್ಭವಿಸುವ ಸಾಧ್ಯತೆ ಇದೆ ಎಂದು ವಾದಿಸಿದರು. ಮೊದಲಿಗೆ ಈ ವಾದವನ್ನು ಒಪ್ಪಿಕೊಳ್ಳಲು ನ್ಯಾಯಪೀಠವು ಹಿಂಜರಿಯಿತಾದರೂ, ಕೊನೆಗೆ ಈ ಹಂತದಲ್ಲಿ ಪ್ರಕರಣದ ವಿಚಾರಣೆ ಮುಂದುವರಿಸುವುದು ಸಮರ್ಪಕವಲ್ಲ ಎಂಬ ನಿರ್ಧಾರಕ್ಕೆ ಬಂದಿತು. ಬಜೆಟ್ ಅಧಿವೇಶನ ಮುಗಿದ ನಂತರ, ಎಪ್ರಿಲ್ 11, 2023ರಂದು ಪ್ರಕರಣದ ಕುರಿತು ನಿರ್ದೇಶನ ನೀಡುವುದಾಗಿ ನ್ಯಾಯಪೀಠ ದಿನಾಂಕ ನಿಗದಿಗೊಳಿಸಿದೆ.

Similar News