20,000 ಕೋಟಿ ರೂ.ಗಳ ಫಾಲೋ ಆನ್ ಷೇರು ಮಾರಾಟ ರದ್ದುಗೊಳಿಸಿದ ಕುರಿತು ಗೌತಮ್ ಅದಾನಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2023-02-02 09:27 GMT

ಹೊಸದಿಲ್ಲಿ: ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇರುವುದರಿಂದ ತಮ್ಮ ಸಮೂಹದ ಸಂಪೂರ್ಣ ಎಫ್‌ಪಿಒಗಳನ್ನು ಹಿಂಪಡೆಯಲಾಗಿದೆ ಎಂದು ಶತ ಕೋಟ್ಯಧಿಪತಿ ಗೌತಮ್ ಅದಾನಿ (Gautam Adani) ಹೇಳಿದ್ದಾರೆ.

ಅಮೆರಿಕಾದ ಕಿರು ಅವಧಿಯ ಮಾರಾಟ ಸಂಸ್ಥೆ ಹಿಂಡೆನ್‌ಬರ್ಗ್ (Hindenburg Research) ಅದಾನಿ ಸಮೂಹದ ಮೇಲೆ ಹಾನಿಕಾರಕ ಆರೋಪ ಮಾಡಿದಾಗಿನಿಂದ, ಅದಾನಿ ಸಮೂಹದ ಶೇರು ಮೌಲ್ಯವು ಸುಮಾರು 90 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ.

ಎಫ್‌ಪಿಒ ಚಂದಾದಾರಿಕೆಯ ಮುಕ್ತಾಯದ ದಿನವಾಗಿದ್ದ ಮಂಗಳವಾರದಂದು ಅದಾನಿ ಎಂಟರ್‌ಪ್ರೈಸಸ್ ರೂ. 20,000 ಕೋಟಿ ಮೌಲ್ಯದ ಹೂಡಿಕೆದಾರರನ್ನು ಪಡೆಯುವಲ್ಲಿ ಯಶಸ್ವಿಯಾದರೂ, ಬುಧವಾರ ರಾತ್ರಿ ಅದಾನಿ ಎಂಟರ್‌ಪ್ರೈಸಸ್ ಸಂಪೂರ್ಣ ಎಫ್‌ಪಿಒಗಳನ್ನು ಹಿಂಪಡೆದು, ಹೂಡಿಕೆದಾರರಿಗೆ ಬಂಡವಾಳ ಮರಳಿಸಲು ನಿರ್ಧರಿಸಿತು.

ಗುರುವಾರ ಈ ಕುರಿತು ಹೂಡಿಕೆದಾರನ್ನುದ್ದೇಶಿಸಿ ಮಾತನಾಡಿದ ಗೌತಮ್ ಅದಾನಿ, "ಎಫ್‌ಪಿಒ ಚಂದಾದಾರಿಕೆ ಸಂಪೂರ್ಣಗೊಂಡಿದ್ದರೂ, ಅದನ್ನು ಹಿಂಪಡೆಯುವ ನಿನ್ನೆಯ ನಿರ್ಧಾರವು ಹಲವರ ಅಚ್ಚರಿಗೆ ಕಾರಣವಾಗಿರಬಹುದು. ಆದರೆ, ನಿನ್ನೆಯ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯನ್ನು ಪರಿಗಣಿಸಿ, ಎಫ್‌ಪಿಒ ಚಂದಾದಾರಿಕೆಯೊಂದಿಗೆ ಮುಂದುವರಿಯುವುದು ನೈತಿಕ ಕ್ರಮವಾಗುವುದಿಲ್ಲ ಎಂದು ಸಂಸ್ಥೆಯ ಮಂಡಳಿಗೆ ಬಲವಾಗಿ ಅನಿಸಿತು" ಎಂದು ಹೇಳಿದ್ದಾರೆ.

ಆದರೆ, ಈ ನಿರ್ಧಾರದಿಂದ ಹಾಲಿ ಕಾರ್ಯಾಚರಣೆಯ ಮೇಲಾಗಲಿ ಅಥವಾ ಭವಿಷ್ಯದ ಯೋಜನೆಗಳ ಮೇಲಾಗಲಿ ಯಾವುದೇ ಪರಿಣಾಮವಾಗುವುದಿಲ್ಲ. ನಾವು ನಿಗದಿತ ಕಾರ್ಯಾಚರಣೆ ಹಾಗೂ ಯೋಜನೆಯ ಅನುಷ್ಠಾನದೆಡೆಗೆ ಗಮನ ಹರಿಸುವೆವು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಂಪನಿಯ ಮೂಲಭೂತ ಆರ್ಥಿಕತೆ ಬಲಿಷ್ಠವಾಗಿದೆ ಎಂದೂ ಗೌತಮ್ ಅದಾನಿ ಪ್ರತಿಪಾದಿಸಿದ್ದಾರೆ. ಮಾರುಕಟ್ಟೆ ಸ್ಥಿರಗೊಂಡ ನಂತರ ಬಂಡವಾಳ ಮಾರುಕಟ್ಟೆ ತಂತ್ರವನ್ನು ಮತ್ತೊಮ್ಮೆ ಪರಾಮರ್ಶಿಸುವುದಾಗಿ ಅವರು ಹೇಳಿದ್ದಾರೆ.

Similar News