ಎಫ್‌ಪಿಒ ವಾಪಸ್‌ ಪಡೆದ ನಂತರವೂ ಮುಂದುವರಿದ ಅದಾನಿ ಷೇರು ಮೌಲ್ಯಗಳ ಕುಸಿತ: 100 ಬಿಲಿಯನ್‌ ಡಾಲರ್‌ಗೂ ಅಧಿಕ ನಷ್ಟ

Update: 2023-02-02 11:06 GMT

ಹೊಸದಿಲ್ಲಿ: "ಷೇರುದಾರರ ಹಿತಾಸಕ್ತಿಗಳನ್ನು" ಕಾಪಾಡುವ ಉದ್ದೇಶದಿಂದ ತಾನು ತನ್ನ ರೂ 20,000 ಕೋಟಿ ಮೌಲ್ಯದ ಎಫ್‌ಪಿಒ ಅನ್ನು ವಾಪಸ್‌ ಪಡೆಯುತ್ತಿರುವುದಾಗಿ ಹಾಗೂ ಹೂಡಿಕೆದಾರರ ಹಣ ವಾಪಸ್‌ ನೀಡುವುದಾಗಿ ಅದಾನಿ ಸಮೂಹ ಘೋಷಿಸಿರುವುದು ಸಂಸ್ಥೆಯ ಆರ್ಥಿಕ ವಹಿವಾಟುಗಳ ಕುರಿತಂತೆ ಹೂಡಿಕೆದಾರರಿಗೆ ಇನ್ನಷ್ಟು ಆತಂಕ ಸೃಷ್ಟಿಯಾಗಿದೆಯೆಂಬುದಕ್ಕೆ ಪುರಾವೆಯೆಂಬಂತೆ ಗುರುವಾರ ಕೂಡ ಅದಾನಿ ಸಂಸ್ಥೆಗಳ ಕಂಪೆನಿಗಳ ಷೇರುಗಳ ಮೌಲ್ಯ ಮತ್ತೆ ಕುಸಿದಿವೆ. 

ಅದಾನಿ ಸಂಸ್ಥೆ ವ್ಯಾಪಕ ಅವ್ಯವಹಾರಗಳಲ್ಲಿ ತೊಡಗಿಕೊಂಡಿದೆ ಎಂದು ಕಳೆದ ವಾರ ಅಮೆರಿಕಾದ ಹಿಂಡೆನ್‌ಬರ್ಗ್‌ ಸಂಸ್ಥೆ ಪ್ರಕಟಿಸಿದ ಸಂಶೋಧನಾ ವರದಿ ಬೆನ್ನಲ್ಲೇ ಉಂಟಾದ ಷೇರು ಮೌಲ್ಯಗಳ ಕುಸಿತದ ಮುಂದುವರಿಕೆಯೊಂದಿಗೆ ಅದಾನಿ ಸಂಸ್ಥೆಯ ನಷ್ಟ 100 ಬಿಲಿಯನ್‌ ಡಾಲರ್‌ಗೂ ಅಧಿಕವಾಗಿದೆ.‌

ಅದಾನಿ ಸಮೂಹದ ಪ್ರಮುಖ ಸಂಸ್ಥೆಯಾಗಿರುವ ಅದಾನಿ ಎಂಟರ್‌ಪ್ರೈಸಸ್‌ನ ಷೇರು ಮೌಲ್ಯ ಇಂದು ಶೇ 10 ರಷ್ಟು ಕುಸಿತ ಕಂಡಿದ್ದರೆ, ಇದೇ ಪರಿಸ್ಥಿತಿ ಅದಾನಿ ಪೋರ್ಟ್ಸ್‌ ಎಂಡ್‌ ಸ್ಪೆಷಲ್‌ ಇಕಮಾಮಿಕ್‌ ಝೋನ್‌,ಅದಾನಿ ಟೋಟಲ್‌ ಗ್ಯಾಸ್‌, ಅದಾನಿ ಗ್ರೀನ್‌ ಎನರ್ಜಿ ಹಾಗೂ ಅದಾನಿ ಟ್ರಾನ್ಸ್‌ಮಿಷನ್‌ನದ್ದಾಗಿತ್ತು. ಅದಾನಿ ಪವರ್‌ ಮತ್ತು ಅದಾನಿ ವಿಲ್ಮಾರ್‌ ಷೇರು ಬೆಲೆಗಳು ತಲಾ ಶೇ 5 ರಷ್ಟು ಕುಸಿತ ಕಂಡಿವೆ.

ಮಧ್ಯಾಹ್ನದ ಟ್ರೇಡಿಂಗ್‌ ಅವಧಿಯಲ್ಲಿ ಅದಾನಿ ಷೇರು ಬೆಲೆಗಳಲ್ಲಿ ಇನ್ನಷ್ಟು ಏರಿಳಿತಿಗಳ ಸಾಧ್ಯತೆಯಿರಬಹುದೆಂದು ತಜ್ಞರು ಹೇಳಿದ್ದಾರೆ. ಈಗಾಗಲೇ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ದೇಶದ ಬ್ಯಾಂಕುಗಳಲ್ಲಿ ಅದಾನಿ ಸಂಸ್ಥೆಗಳ ಸಾಲ ಮತ್ತಿತರ ಮಾಹಿತಿಯನ್ನು ಕೇಳಿದೆ. ಅದಾನಿ ಸಮೂಹದ ಸೆಕ್ಯುರಿಟಿಗಳ ಆಧಾರದಲ್ಲಿ ತನ್ನ ಕ್ಲೈಂಟ್‌ಗಳಿಗೆ ಮಾರ್ಜಿನ್‌ ಸಾಲ ವಿಸ್ತರಿಸುವುದನ್ನು ಸಿಟಿಗ್ರೂಪ್‌ನ ವೆಲ್ತ್‌ ಯುನಿಟ್‌ ಈಗಾಗಲೇ ನಿಲ್ಲಿಸಿದೆ.

ಅದಾನಿ ಸಮೂಹದ ಬಗ್ಗೆ ಹಿಂಡೆನ್‌ಬರ್ಗ್‌ ವರದಿಯಲ್ಲಿರುವ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿಯುವ ಎಲ್ಲಾ ಸಾಧ್ಯತೆಗಳಿವೆ. ಈ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಆಗ್ರಹಿಸಲಾಗುವುದು ಎಂದು ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ಹೇಳಿದ್ದಾರೆ.

Similar News