ವಿಧಾನ ಪರಿಷತ್ ಚುನಾವಣೆ: ಆರೆಸ್ಸೆಸ್ ನ ಕೇಂದ್ರ ಕಚೇರಿಯಿರುವ ನಾಗ್ಪುರದಲ್ಲಿ ಬಿಜೆಪಿಗೆ ಭಾರೀ ಮುಖಭಂಗ !

ನಿತಿನ್ ಗಡ್ಕರಿ, ಫಡ್ನವೀಸ್ ರ ತವರು ನೆಲದಲ್ಲೇ ಸೋಲು ಕಂಡ ಪಕ್ಷ

Update: 2023-02-02 16:04 GMT

ಮುಂಬೈ: ತನ್ನ ಪ್ರಮುಖ ಭದ್ರಕೋಟೆಗಳಲ್ಲಿ ಬಿಜೆಪಿಗೆ (BJP) ಭಾರೀ ಚುನಾವಣಾ ಹಿನ್ನಡೆಯಾಗಿದ್ದು, ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟದ ಅಭ್ಯರ್ಥಿ ಗುರುವಾರ ನಾಗ್ಪುರದ ಮಹಾರಾಷ್ಟ್ರ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

ಫಲಿತಾಂಶವು ಬಿಜೆಪಿಗೆ ಭಾರಿ ಹೊಡೆತವನ್ನು ನೀಡಿದ್ದು, ಅದರ ಸೈದ್ಧಾಂತಿಕ ಮೂಲವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನ ಕೇಂದ್ರ ಕಚೇರಿಯಿರುವ ಜಾಗದಲ್ಲೇ ಮುಖಭಂಗವಾಗಿದೆ. ಜೊತೆಗೆ, ಇದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರಂತಹ ಪ್ರಮುಖ ನಾಯಕರ ತವರು ಕ್ಷೇತ್ರವಾಗಿದೆ.

ಶಿವಸೇನಾ ಭಿನ್ನಮತೀಯ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರನ್ನು ಬಿಟ್ಟು, ಜೂನ್‌ನಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ ರಾಜ್ಯದಲ್ಲಿ ನಡೆದ ಪ್ರಮುಖ ಸ್ಪರ್ಧೆ ಇದಾಗಿದೆ. ಚುನಾವಣೆಯಲ್ಲಿ ಎಂವಿಎಯ ಸುಧಾಕರ್ ಅಡ್ಬಲೆ ನಾಗಪುರ ಶಿಕ್ಷಕರ ಸ್ಥಾನವನ್ನು ಗೆದ್ದು, ಬಿಜೆಪಿ ಬೆಂಬಲಿತ ನಾಗೋ ಗನಾರ್ ಅವರನ್ನು ಸೋಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಶಾಸಕಾಂಗದ ಮೇಲ್ಮನೆಗೆ ದ್ವೈವಾರ್ಷಿಕ ಚುನಾವಣೆಗಳು ಮುಖ್ಯವಾಗಿ ಬಿಜೆಪಿ ಹಾಗೂ ಶಿಂಧೆಯ ಶಿವಸೇನೆ ಬಣದ ಆಡಳಿತದ ಮೈತ್ರಿ ಮತ್ತು  ಠಾಕ್ರೆ ಅವರ ಶಿವಸೇನಾ, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಒಳಗೊಂಡಿರುವ ಎಂವಿಎ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆಯಿತು.

ಕೊಂಕಣ ಶಿಕ್ಷಕರ ಕ್ಷೇತ್ರದಲ್ಲಿ ಶೇ.91.02 ಅತಿ ಹೆಚ್ಚು ಮತದಾನವಾಗಿದ್ದು, ನಾಸಿಕ್ ವಿಭಾಗದ ಪದವೀಧರರ ಸ್ಥಾನದಲ್ಲಿ ಅತಿ ಕಡಿಮೆ ಶೇ.49.28ರಷ್ಟು ಮತದಾನವಾಗಿದೆ.

ಔರಂಗಾಬಾದ್, ನಾಗ್ಪುರ ಮತ್ತು ಕೊಂಕಣ ವಿಭಾಗದ ಶಿಕ್ಷಕರ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.86, ಶೇ.86.23 ಮತ್ತು ಶೇ.91.02ರಷ್ಟು ಮತದಾನವಾಗಿದೆ.

ಇದನ್ನೂ ಓದಿ: ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋ.ರೂ. ಹಣ ನೀಡ್ತೇನೆ: ಸಿದ್ದರಾಮಯ್ಯಗೆ ಅಭಿಮಾನಿ ಆಹ್ವಾನ

Similar News