ಯಕ್ಷಗಾನ ಪರಂಪರೆ ಉಳಿಸಿ-ಬೆಳೆಸಿ: ಡಾ.ಜಿ.ಎಲ್.ಹೆಗಡೆ ಕರೆ

Update: 2023-02-02 15:38 GMT

ಉಡುಪಿ: ಕಲಾವಿದರು ಯಕ್ಷಗಾನದ ಪರಂಪರೆಯನ್ನು ಉಳಿಸಿ ಬೆಳೆಸುವಂತೆ ಯಕ್ಷಗಾನ ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ.ಜಿ.ಎಲ್.ಹೆಗಡೆ ಕರೆ ನೀಡಿದ್ದಾರೆ.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಇಂದ್ರಾಳಿಯ ಯಕ್ಷಗಾನ ಕೇಂದ್ರ ಹಾಗೂ ಯಕ್ಷರಂಗದ 50ನೆಯ ವಾರ್ಷಿಕೋತ್ಸವ ಹಾಗೂ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರುವೀರಭದ್ರ ನಾಯಕ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ  ನೀಡಿ ಅವರು ಮಾತನಾಡುತಿದ್ದರು.

ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು  ಚಂಡೆ, ಮದ್ದಲೆ, ಭಾಗವತಿಕೆ, ನೃತ್ಯದ ಮೂಲಕ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಯಕ್ಷರಂಗ ಕಲಾದರಿಂದ ಭೀಷ್ಮಪರ್ವ ಯಕ್ಷಗಾನ ಪ್ರದರ್ಶನ ನಡೆಯಿತು.

ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಯಕ್ಷಗಾನ ಕೇಂದ್ರ ಕೊಡಮಾಡುವ ಕೇಂದ್ರದ ಪ್ರಥಮ ಗುರು ವೀರಭದ್ರ ನಾಯಕ ಪ್ರಶಸ್ತಿಯನ್ನು ಬಡಗುತಿಟ್ಟಿನ ಮೇರು ಕಲಾವಿದ ಮಹಾಬಲ ದೇವಾಡಿಗ ಕಮಲಶಿಲೆ ಇವರಿಗೆ ಪ್ರದಾನ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಮಾಹೆಯ ಸಹಕುಲಪತಿ ಡಾ.ನಾರಾಯಣ ಸಭಾಹಿತ್ ವಹಿಸಿದ್ದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಡಾ. ಪಿ.ಎಲ್. ರಾವ್ ಉಪಸ್ಥಿತರಿದ್ದರು. ಸಲಹಾ ಸಮಿತಿ ಯ ಪ್ರಸಕ್ತ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಸ್. ಉದಯ ಕುಮಾರ್ ಶೆಟ್ಟಿ ಅಭಿನಂದಿಸಿದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ವಂದಿಸಿದರು.

ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ 50ನೇ ವಾರ್ಷಿಕೋತ್ಸವ ವನ್ನು ಎರಡನೇ ದಿನ ಮಾಹೆಯ ನಿವೃತ್ತ ಡೀನ್ ಹಾಗೂ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಡಾ. ಪಿ.ಎಲ್.ಎನ್.ರಾವ್ ಅವರನ್ನು ಸನ್ಮಾನಿಸಲಾಯಿತು. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್. ಬಲ್ಲಾಳ್ ಸನ್ಮಾನಿಸಿದರು.
ಮಾಹೆಯ ಕುಲಸಚಿವ ಡಾ.ಪಿ. ಗಿರಿಧರ್ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಬಿ.ಭುವನ ಪ್ರಸಾದ್ ಹೆಗ್ಡೆ ಅಭಿನಂದನಾ ಮಾತುಗಳನ್ನಾಡಿದರು. ಪಳ್ಳಿ ಕಿಶನ್ ಹೆಗ್ಡೆ, ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಶೆಣೈ,  ಮಂಜುನಾಥ ಮಯ್ಯ ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಮಂಜುನಾಥ ಮಯ್ಯ ವಂದಿಸಿದರು. ಉಪನ್ಯಾಸಕ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಹವ್ಯಾಸಿ ವಿದ್ಯಾರ್ಥಿಗಳಿಂದ ‘ವೀರಮಣಿ ಕಾಳಗ’ ಹಾಗೂ ಹವ್ಯಾಸಿ ಕಲಾವಿದರಿಂದ ‘ವೀರವೃಷಸೇನ’ ಯಕ್ಷಗಾನ ಪ್ರದರ್ಶನ ಗೊಂಡಿತು.

Similar News