ಮಾರಿಕೊಳ್ಳುವ ಮತದಾರರೂ... ಕೊಂಡುಕೊಂಡಿದ್ದೇವೆ ಎಂಬ ಜನಪ್ರತಿನಿಧಿಗಳೂ...

Update: 2023-02-03 06:22 GMT

ಇತ್ತೀಚೆಗೆ ರಮೇಶ್ ಜಾರಕಿಹೊಳಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತೀ ಮತದಾರರಿಗೆ 6 ಸಾವಿರ ರೂ. ಕೊಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟರು. ಎದುರಾಳಿ ಅಭ್ಯರ್ಥಿ ಎಷ್ಟೇ ದುಡ್ಡು ಖರ್ಚು ಮಾಡಿದರೂ ಅದಕ್ಕಿಂತ 10 ಕೋಟಿ ಹೆಚ್ಚಿನ ಹಣ ಖರ್ಚು ಮಾಡಲು ನಾವು ಸಿದ್ಧ ಎಂದೂ ಹೇಳಿದರು. ''ಪ್ರತಿಯೊಬ್ಬರಿಗೂ 6 ಸಾವಿರ ರೂ. ಕೊಡದಿದ್ದರೆ ನಮಗೆ ಮತ ಹಾಕಲೇಬೇಡಿ'' ಎಂದೂ ಹೇಳಿಬಿಟ್ಟರು.

ರಮೇಶ್ ಜಾರಕಿಹೊಳಿ ಮತದಾರರಿಗೆ ಲಂಚದ ಬಹಿರಂಗ ಆಮಿಷವೊಡ್ಡಿ, ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ರೂ. ಕೊಟ್ಟು ಖರೀದಿ ಮಾಡುವ ಸಂಚು ನಡೆಸಿದ್ದಾರೆ, ಅವರ ವಿರುದ್ಧ ಹಾಗೂ ಅವರಿಗೆ ಪ್ರೇರಣೆ ನೀಡಿರುವ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ತನಿಖೆ ಆಗಬೇಕು ಎಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ಕಾಂಗ್ರೆಸ್ ನಿಯೋಗ ದೂರು ಕೊಟ್ಟಿತು.

ಆದರೆ ತಮಾಷೆ ಏನೆಂದರೆ, ಅದೇ ಕಾಂಗ್ರೆಸ್‌ನ ಶಾಸಕ ಭೈರತಿ ಸುರೇಶ್ ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ 40 ಸಾವಿರ ಸ್ಮಾರ್ಟ್ ಟಿವಿಗಳನ್ನು ಮತದಾರರಿಗೆ ಹಂಚುತ್ತಿರುವುದು ದೊಡ್ಡ ಸುದ್ದಿಯಾಗಿದೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಜನರಿಗೆ ಹಂಚಿಯೂ ಆಗಿದೆ ಎನ್ನಲಾಗಿದೆ. ಅದರ ಬಗ್ಗೆ ಭೈರತಿ ಸುರೇಶ್ ''ನಾನು ಐಟಿ ಪಾವತಿ ಮಾಡಿದ ಆದಾಯದಿಂದ ಕೊಟ್ಟಿದ್ದೇನೆ. ಬೇಕಾದರೆ ಅವರೂ ಕೊಡಲಿ'' ಎಂದಿದ್ದಾರೆ. 32 ಇಂಚಿನ ಟಿವಿ ಸೆಟ್ ಒಂದಕ್ಕೆ ಬರೀ 10 ಸಾವಿರ ರೂ. ಅಂದುಕೊಂಡರೂ 40 ಸಾವಿರ ಟಿವಿಗಳಿಗೆ 40 ಕೋಟಿ ರೂ. ಆಗುತ್ತದೆ.

ಕೆಲ ಸಮಯದ ಹಿಂದೆ ಕಾಂಗ್ರೆಸ್ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಕೂಡ ಮತದಾರರಿಗೆ ಕುಕ್ಕರ್ ವಿತರಣೆ ಮಾಡಿದ್ದರೆನ್ನುವುದು ಸುದ್ದಿಯಾಗಿತ್ತು. ಇನ್ನೊಂದೆಡೆ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಕ್ಷೇತ್ರದ ಕೆಲವು ಮಹಿಳೆಯರಿಗೆ ಕುಕ್ಕರ್ ಹಂಚಿರುವ ಸುದ್ದಿ ಬಂದಿದೆ. ನವೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಕೂಡ ಕುಕ್ಕರ್ ಸದ್ದು ಜೋರಾಗಿ ಕೇಳಿಸಿತ್ತಂತೆ. ಕಾಂಗ್ರೆಸ್‌ನ ಮಾಜಿ ಜಿ.ಪಂ. ಸದಸ್ಯ ನಾರಾ ಭರತ್ ರೆಡ್ಡಿ ಅಸೆಂಬ್ಲಿ ಚುನಾವಣೆ ಟಿಕೆಟ್ ಆಕಾಂಕ್ಷಿ. ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ ಪುತ್ರನಾಗಿರುವ ಅವರು ತಮ್ಮ ಹುಟ್ಟುಹಬ್ಬದ ನೆಪ ಮಾಡಿಕೊಂಡು ಮನೆಮನೆಗೆ ಕುಕ್ಕರ್ ಹಂಚಿದ್ದರು. ಈ ಹಿಂದೆ ಮುನಿರತ್ನ, ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಕುಕ್ಕರ್ ಹಂಚಿ ಗೆದ್ದಿದ್ದು ಸುದ್ದಿಯಾಗಿತ್ತು. ಇದು ಭರತ್ ರೆಡ್ಡಿಗೆ ಪ್ರೇರಣೆ ಎನ್ನಲಾಗಿತ್ತು.

ಇನ್ನು ಗೌರಿಬಿದನೂರು ಕ್ಷೇತ್ರದಲ್ಲಂತೂ ಆಗಸ್ಟ್ ತಿಂಗಳಲ್ಲೇ ಗಿಫ್ಟ್ ಆಮಿಷ ಶುರುವಾಗಿತ್ತು. ಸಮಾಜಸೇವೆ ಮೂಲಕ ಜನಪ್ರಿಯರಾಗಿರುವ ಕೆ.ಎಚ್.ಪುಟ್ಟಸ್ವಾಮಿಗೌಡ ಪ್ರತೀ ಮನೆಗೂ ಗಿಫ್ಟ್ ಮುಟ್ಟಿಸಿದ ಸುದ್ದಿ ಪ್ರಚಾರ ಪಡೆದಿತ್ತು. ಗೌರಿಬಿದನೂರು ಕ್ಷೇತ್ರ ಮಾತ್ರವಲ್ಲ, ಚಿಕ್ಕಬಳ್ಳಾಪುರ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಮತದಾರರ ಮನವೊಲಿಸಲು ಇದೇ ಕೆಲಸದಲ್ಲಿ ತೊಡಗಿದ್ದಾರೆನ್ನಲಾಗಿತ್ತು. ಕೆಲವರು ನೇರವಾಗಿ ಗಿಫ್ಟ್ ಕೊಟ್ಟರೆ ಇನ್ನು ಕೆಲವರು ಮತದಾರರಿಗೆ ಮೊದಲು ಟೋಕನ್ ಕೊಡುತ್ತಾರೆ. ಟೋಕನ್ ಪಡೆದವರು ನಿಗದಿತ ದಿನ ಹೋದರೆ ಅವರಿಗೆ ಸೀರೆ ಮತ್ತಿತರ ಗಿಫ್ಟ್ ಕೊಡಲಾಗುತ್ತದೆಯಂತೆ. ಬಾಗೇಪಲ್ಲಿಯಲ್ಲಿ ಜೆಡಿಎಸ್ ಮುಖಂಡ ಡಿ.ಜೆ.ನಾಗರಾಜರೆಡ್ಡಿ ಮತ್ತು ಸಮಾಜಸೇವಕ ಮಿಥುನ್ ರೆಡ್ಡಿ ಗಣೇಶ ಮೂರ್ತಿಗಳ ವಿತರಣೆ ಮಾಡಿದ್ದಾರೆ ಎನ್ನಲಾಗಿತ್ತು. ಚಿಂತಾಮಣಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿ ಕೂಡ ಗಣೇಶಮೂರ್ತಿ ವಿತರಿಸಿದ್ದರಂತೆ.

ಇವೆಲ್ಲ ತೀರಾ ದೊಡ್ಡದಾಗಿ ಸುದ್ದಿಯಾದ ಕೆಲವೇ ಕೆಲವು ಘಟನೆಗಳು ಮಾತ್ರ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಹುತೇಕ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮತದಾರರನ್ನು ಓಲೈಸುವ, ಅವರಿಗೆ ಬಗೆಬಗೆಯಲ್ಲಿ ಆಮಿಷವೊಡ್ಡುವ ಕಸರತ್ತೂ ಜೋರಾಗಿದೆ. ಈ ವಿಚಾರದಲ್ಲಿ ಪಕ್ಷಭೇದವೇ ಇಲ್ಲ.
ನಿಜವಾಗಿ ಚುನಾವಣೆ ಸಮೀಪಿಸುವಾಗ ಆಯಾ ಕ್ಷೇತ್ರದ ಶಾಸಕರು ಹಾಗೂ ಸಚಿವರು ತಾವು ಕಳೆದ ಐದು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ಕೊಡಬೇಕು. ಚುನಾವಣೆಗೆ ಸ್ಪರ್ಧಿಸುವಾಗ ಶಾಸಕರು ನೀಡಿದ್ದ ಭರವಸೆಗಳಲ್ಲಿ ಎಷ್ಟು ಪೂರೈಸಿದ್ದಾರೆ, ಎಷ್ಟು ಬಾಕಿಯಿದೆ ಎಂದು ಮತದಾರರು ಲೆಕ್ಕ ಹಾಕಬೇಕು. ಈಗ ಅವರೆದುರು ಸ್ಪರ್ಧಿಸುವವರು ಅವರ ವೈಫಲ್ಯಗಳನ್ನು ಜನರ ಮುಂದಿಡಬೇಕು. ಆದರೆ ಎಲ್ಲಿಯಾದರೂ ಹೀಗೆ ನಡೆಯುತ್ತಿದೆಯೇ? ಹಾಗಾದರೆ ಪ್ರಜಾಪ್ರಭುತ್ವ ಹಾಗೂ ನಮ್ಮ ಚುನಾವಣಾ ವ್ಯವಸ್ಥೆ ಎಲ್ಲಿಗೆ ಬಂದುಮುಟ್ಟಿದೆ?
ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ಇವ್ಯಾವುದೂ ರಹಸ್ಯವಾಗಿ ನಡೆಯುತ್ತಿಲ್ಲ. ಇವೆಲ್ಲವೂ ಎಲ್ಲರಿಗೂ ಗೊತ್ತಿದ್ದೇ ನಡೆಯುತ್ತದೆ ಮತ್ತು ಚುನಾವಣಾ ಆಯೋಗಕ್ಕೂ ಗೊತ್ತಿರುತ್ತದೆ. ಆದರೆ ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಾಗಿಲ್ಲ ಎಂಬ ಸಬೂಬು ಸಿದ್ಧವಿದೆ. ಜಾರಿಯಾದ ಮೇಲೂ ಚುನಾವಣಾ ಅಕ್ರಮಗಳ ಮೇಲೆ ಆಯೋಗ ಅದೆಷ್ಟು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತದೆ ಎಂಬುದು ಇತ್ತೀಚಿನ ಹಲವು ಚುನಾವಣೆಗಳಲ್ಲಿ ಸ್ಪಷ್ಟವಾಗಿ ಕಂಡಿದೆ. ಹಾಗಾಗಿ ಆ ಬಗ್ಗೆ ದೊಡ್ಡ ನಿರೀಕ್ಷೆ ಇಡುವುದೇ ತಪ್ಪಾಗುತ್ತದೆ.

ದೊಡ್ಡ ರಾಜ್ಯಗಳಲ್ಲಿ ಪ್ರತೀ ವಿಧಾನಸಭಾ ಅಭ್ಯರ್ಥಿಗೆ ನೀತಿ ಸಂಹಿತ ಘೋಷಣೆಯಾದ ಮೇಲೆ ಖರ್ಚಿನ ಮಿತಿ 40 ಲಕ್ಷ ರೂಪಾಯಿ. ಆದರೆ ನೀತಿ ಸಂಹಿತೆ ಘೋಷಣೆಯಾದ ಮೇಲೆಯೇ ಪ್ರತೀ ಕ್ಷೇತ್ರದಲ್ಲಿ ಪ್ರತಿಯೊಂದು ದೊಡ್ಡ ಪಕ್ಷದ ಅಭ್ಯರ್ಥಿ ಕೋಟ್ಯಂತರ ರೂಪಾಯಿ ದುಡ್ಡು ಚೆಲ್ಲುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಉಡುಗೊರೆ ಅಥವಾ ದುಡ್ಡು ಪಡೆದು ಮತ ಹಾಕುವ ಮತದಾರನಿಗೆ ನಾಳೆ ಆ ಶಾಸಕನನ್ನು, ಸಂಸದನನ್ನು, ಸಚಿವನನ್ನು, ಸರಕಾರವನ್ನು ಪ್ರಶ್ನಿಸುವ ಯಾವ ನೈತಿಕತೆ ಇರಲು ಸಾಧ್ಯ? ಕೊಟ್ಟಿದ್ದೇವಲ್ಲವೇ, ಕೊಂಡುಕೊಂಡಿದ್ದೇವಲ್ಲವೇ ಎಂಬ ಅಹಂಕಾರ ಆರಿಸಿಹೋದವರಿಗೆ ಇರುವಾಗ ಜನರಿಗೋಸ್ಕರ ಅವರು ಏನನ್ನಾದರೂ ಮಾಡಲು ಸಾಧ್ಯವೆ? ಇಲ್ಲಿ ಹಂಚಿದ ಕೋಟಿಕೋಟಿ ರೂ.ಗಳನ್ನು ಮತ್ತೆ ದುಡಿದುಕೊಳ್ಳುವುದಕ್ಕೆ ಮಾತ್ರವೇ ಅವರೆಲ್ಲ ತಮ್ಮ ಅಧಿಕಾರ ಬಳಸುತ್ತಾರಲ್ಲವೆ?

Similar News