ಬಿಹಾರಕ್ಕೆ ಹೋಗಬೇಕಿದ್ದ ಪ್ರಯಾಣಿಕ ತಲುಪಿದ್ದು ರಾಜಸ್ಥಾನಕ್ಕೆ: ಇಂಡಿಗೋ ಸಂಸ್ಥೆಯ ಮತ್ತೊಂದು ಯಡವಟ್ಟು

Update: 2023-02-03 15:55 GMT

ಹೊಸದಿಲ್ಲಿ: ಇಂಡಿಗೋ ವಿಮಾನದಲ್ಲಿ ಪಾಟ್ನಾಗೆ ತೆರಳಬೇಕಿದ್ದ ಪ್ರಯಾಣಿಕನೊಬ್ಬ ವಿಮಾನಯಾನ ಸಂಸ್ಥೆಯ ಇನ್ನೊಂದು ವಿಮಾನವನ್ನು ಹತ್ತಿ ರಾಜಸ್ಥಾನದ ಉದಯಪುರಕ್ಕೆ ಬಂದಿಳಿದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ.

ಘಟನೆಯು ಜನವರಿ 30 ರಂದು ನಡೆದಿದ್ದು, ಮರುದಿನ ಪ್ರಯಾಣಿಕನನ್ನು ಅವರು ಹೋಗಬೇಕಾದ ಗಮ್ಯಸ್ಥಾನಕ್ಕೆ ಕಳುಹಿಸಲಾಯಿತು ಎಂದು ndtv.com ವರದಿ ಮಾಡಿದೆ.

ಅಫ್ಸರ್ ಹುಸೇನ್ ಎಂಬ ಪ್ರಯಾಣಿಕರು ಇಂಡಿಗೋ ಫ್ಲೈಟ್ 6E-214 ಮೂಲಕ ಪಾಟ್ನಾಗೆ ಟಿಕೆಟ್ ಕಾಯ್ದಿರಿಸಿದ್ದರು. ನಿಗದಿತ ವಿಮಾನವನ್ನು ಹತ್ತಲು ಜನವರಿ 30 ರಂದು ದಿಲ್ಲಿ ವಿಮಾನ ನಿಲ್ದಾಣವನ್ನು ತಲುಪಿದ್ದರು ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಅವರು ತಪ್ಪಾಗಿ ಉದಯಪುರಕ್ಕೆ ತೆರಳಬೇಕಾದ ಇಂಡಿಗೋ 6E-319 ವಿಮಾನವನ್ನು ಹತ್ತಿದ್ದಾರೆ ಎಂದು ಅವರು ತಿಳಿಸಿದರು.

ಉದಯಪುರ ವಿಮಾನ ನಿಲ್ದಾಣದಲ್ಲಿ ಇಳಿದ ನಂತರವೇ ಪ್ರಯಾಣಿಕರಿಗೆ ಪ್ರಮಾದದ ಅರಿವಾಗಿದೆ.

ಬಳಿಕ ಅವರು ಉದಯಪುರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಈ ವಿಷಯದ ಬಗ್ಗೆ ವಿಮಾನಯಾನ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.

ವಿಮಾನಯಾನ ಸಂಸ್ಥೆಯು ಅದೇ ದಿನ ಅವರನ್ನು ದಿಲ್ಲಿಗೆ ಕರೆದೊಯ್ದು, ಮರುದಿನ (ಜನವರಿ 31) ರಂದು ಪಾಟ್ನಾಕ್ಕೆ ಕರೆದೊಯ್ದಿದೆ ಎಂದು ವರದಿಯಾಗಿದೆ.

"ನಾವು ಈ ವಿಷಯದ ಬಗ್ಗೆ ವರದಿಯನ್ನು ಕೇಳುತ್ತಿದ್ದೇವೆ. ವಿಮಾನಯಾನ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ.

"ನಾವು ಈ ವಿಷಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ" ಎಂದು ಇಂಡಿಗೋ ಸಂಸ್ಥೆ ಹೇಳಿದೆ.

ಇದಕ್ಕೂ ಮೊದಲು ಜನವರಿ 13 ರಂದು, ಇಂದೋರ್‌ಗೆ ಹೋಗಬೇಕಿದ್ದ ಪ್ರಯಾಣಿಕರೊಬ್ಬರು ತಪ್ಪಾದ ವಿಮಾನವನ್ನು ಹತ್ತಿ ನಾಗ್ಪುರ ವಿಮಾನ ನಿಲ್ದಾಣಕ್ಕೆ ಹೋಗಿದ್ದರು.

Similar News