ಜಾಮಿಯಾ ಹಿಂಸಾಚಾರ ಪ್ರಕರಣದಲ್ಲಿ ಶರ್ಜೀಲ್‌, ಸಫೂರ ಝರ್ಗರ್‌ ಮತ್ತಿತರರನ್ನು ಪೊಲೀಸರು ಬಲಿಪಶು ಮಾಡಿದ್ದರು: ನ್ಯಾಯಾಲಯ

ಅಸಮ್ಮತಿಯನ್ನು ಉತ್ತೇಜಿಸಬೇಕು, ದಮನಿಸಬಾರದು ಎಂದ ಕೋರ್ಟ್

Update: 2023-02-04 12:33 GMT

ಹೊಸದಿಲ್ಲಿ: ದಿಲ್ಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಸಮೀಪ 2019 ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ನ್ಯಾಯಾಲಯ ಶರ್ಜೀಲ್‌ ಇಮಾಮ್‌, ಸಫೂರಾ ಝರ್ಗರ್‌, ಆಸಿಫ್‌ ಇಕ್ಬಾಲ್‌ ಮತ್ತು ಎಂಟು ಇತರರನ್ನು ದೋಷಮುಕ್ತಗೊಳಿಸಿದೆ ಹಾಗೂ ಪೊಲೀಸರು ಅವರನ್ನು ʻಬಲಿಪಶುಗಳನ್ನಾಗಿಸಿದ್ದರು" ಎಂದು ಹೇಳಿದೆ.

ಆದರೆ ಶರ್ಜೀಲ್‌ ಇಮಾಂ ವಿರುದ್ಧ 2020 ದಿಲ್ಲಿ ಹಿಂಸಾಚಾರ ಸಂಬಂಧಿತ ಪ್ರಕರಣ ಬಾಕಿಯಿರುವುದರಿಂದ ಅವರು ಜೈಲಿನಿಂದ ಬಿಡುಗಡೆಗೊಳ್ಳುವುದಿಲ್ಲ.

"ಅಸಮ್ಮತಿಯನ್ನು ಉತ್ತೇಜಿಸಬೇಕು, ದಮನಿಸಬಾರದು," ಎಂದು ಅವರನ್ನು ದೋಷಮುಕ್ತಗೊಳಿಸಿಹೊರಡಿಸಿದ ಆದೇಶದಲ್ಲಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅರುಲ್‌ ವರ್ಮ ಹೇಳಿದ್ದಾರೆ.

"ಅದೇ ಸಮಯ ಅಸಮ್ಮತಿಯನ್ನು ಸಂಪೂರ್ಣವಾಗಿ ಶಾಂತಿಯುತವಾಗಿ ವ್ಯಕ್ತಪಡಿಸಬೇಕು ಮತ್ತು ಅದು ಹಿಂಸಾತ್ಮಕ ರೂಪ ತಾಳಬಾರದು," ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ "ಸರಿಯಾಗಿಲ್ಲದ" ಚಾರ್ಜ್‌ಶೀಟ್‌ ಸಲ್ಲಿಸಿದ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ದಿಲ್ಲಿ ಪೊಲೀಸರ ವಾದದಲ್ಲಿ ಯಾವುದೇ ಪುರಾವೆಯಿರಲಿಲ್ಲ ಎಂದು  ಹೇಳಿದೆ.

ಆ ದಿನ ಗುಂಪೊಂದು ಸಮಸ್ಯೆ ಸೃಷ್ಟಿಸಿದ್ದರೂ, ಪೊಲೀಸರು ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸುವ ಬದಲು ಇಮಾಮ್‌, ಝರ್ಗರ್‌ ಮತ್ತು ಇತರರನ್ನು ʼಬಲಿಪಶುʼಗಳಾಗಿ ಬಂಧಿಸಿದರು," ಎಂದು ನ್ಯಾಯಾಲಯ ಹೇಳಿದೆ.

ಜಾಮಿಯಾ ಮಿಲ್ಲಿಯಾ ವಿವಿ ಸಮೀಪ ಡಿಸೆಂಬರ್‌ 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿತ್ತು. ಪ್ರಕರಣದಲ್ಲಿ ಪೊಲೀಸರು 12 ಮಂದಿ ಆರೋಪಿಗಳನ್ನು ಹೆಸರಿಸಿದ್ದರು. ಇದೀಗ ಒಟ್ಟು 11 ಮಂದಿಯನ್ನು ದೋಷಮುಕ್ತಗೊಳಿಸಲಾಗಿದೆ.

ಇಮಾಮ್‌, ತನ್ಹಾ ಮತ್ತು ಝರ್ಗರ್‌ ಹೊರತುಪಡಿಸಿ ನ್ಯಾಯಾಲಯವು ಮುಹಮ್ಮದ್‌ ಅಬುಝರ್‌, ಉಮೈರ್‌ ಅಹ್ಮದ್‌, ಮುಹಮ್ಮದ್‌ ಶೋಯಿಬ್.‌ ಮಹಮೂದ್‌ ಅನ್ವರ್, ಮುಹಮ್ಮದ್‌ ಖಾಸಿಂ, ಮುಹಮ್ಮದ್‌ ಬಿಲಾಲ್‌ ನದೀಂ, ಶಹಝರ್‌ ರಝಾ ಖಾನ್‌ ಮತ್ತು ಚಂದಾ ಯಾದವ್‌ ಅವರನ್ನು ದೋಷಮುಕ್ತಗೊಳಿಸಿದೆ.

Similar News