ಮೋರ್ಬಿ ತೂಗುಸೇತುವೆ ದುರಂತ: ಆರೋಪಿಯ ಬೆಂಬಲಕ್ಕೆ ನಿಂತ ಪಾಟಿದಾರ್‌ ಸಮುದಾಯ; ಬಿಜೆಪಿ ಮಾಜಿ ಶಾಸಕ ಸಮರ್ಥನೆ

Update: 2023-02-04 13:18 GMT

ರಾಜ್‌ಕೋಟ್:‌ ಮೊರ್ಬಿ ಸೇತುವೆ ಕುಸಿತ ಪ್ರಕರಣದ ಮುಖ್ಯ ಆರೋಪಿ ʼಒರೆವಾ ಗ್ರೂಪ್‌ʼನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಅವರಿಗೆ ಬೆಂಬಲವನ್ನು ನೀಡುವುದಾಗಿ ಪಾಟಿದಾರ್ ಸಮುದಾಯದ ಉಮಿಯಾಧಮ್ ಸಿದ್ಸಾರ್ (ಧಾರ್ಮಿಕ ಕೇಂದ್ರ)ವು ವಾಗ್ದಾನ ಮಾಡಿದೆ.

ಮೋರ್ಬಿ ತೂಗುಸೇತುವೆ ಕುಸಿತದ ಅಪಘಾತದಲ್ಲಿ 35 ಮಕ್ಕಳು ಸೇರಿದಂತೆ 132 ಜನರು ಸಾವನ್ನಪ್ಪಿದ ಪ್ರಕರಣದಲ್ಲಿ ಜೈಸುಖ್ ಪಟೇಲ್ ಪ್ರಮುಖ ಆರೋಪಿಯಾಗಿದ್ದಾರೆ. ಜನವರಿ 27 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಪೊಲೀಸರು ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ.

ಜನವರಿ 31 ರಂದು ಪಟೇಲ್ ನ್ಯಾಯಾಲಯದ ಮುಂದೆ ಶರಣಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಸ್ಥಳೀಯ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಫೆಬ್ರವರಿ 8 ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.

ಫೆಬ್ರವರಿ 4 ರಂದು, ಉಮಿಯಾ ಸಿದ್ಸಾರ್ ಟ್ರಸ್ಟಿಗಳು ಜಯಸುಖ್ ಪಟೇಲ್ ಅವರನ್ನು ಬೆಂಬಲಿಸಲು ಪಾಟಿದಾರ್ ಸಮುದಾಯದ ಸದಸ್ಯರಿಗೆ ಬಹಿರಂಗ ಮನವಿ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.  

ಜೈಸುಖ್ ಪಟೇಲ್ ಅವರು, ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ತೂಗು ಸೇತುವೆ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದರು. ಅವರು ಯಾವುದೇ ವಾಣಿಜ್ಯ ಆಸಕ್ತಿಯನ್ನು ಹೊಂದಿರಲಿಲ್ಲ ಮತ್ತು ರಿಪೇರಿ ಕೆಲಸದಲ್ಲಿ ಉಂಟಾಗುವ ಸಂಪೂರ್ಣ ವೆಚ್ಚವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರಿಗೆ ತಿಳಿದಿತ್ತು ಎಂದು ಉಮಿಯಾ ಸಿದ್ಸಾರ್ ಪತ್ರವು ಹೇಳಿದೆ.

ಕೇವಲ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಇಂತಹವರಿಗೆ ಕಿರುಕುಳ ನೀಡಿದರೆ ಯಾವೊಬ್ಬ ಉದ್ಯಮಿಯೂ ಸಮಾಜಮುಖಿ ಕಾರ್ಯಕ್ಕೆ ಮುಂದಾಗುವುದಿಲ್ಲ ಎಂದು ಮನವಿಯ ಪತ್ರದಲ್ಲಿ ಹೇಳಲಾಗಿದೆ.

ಬಿಜೆಪಿಯ ಮಾಜಿ ಶಾಸಕ ಬವಾಂಜಿ ಮೆಟಾಲಿಯಾ, ಜಯಸುಖ್ ಪಟೇಲ್ ಅವರನ್ನು ಬೆಂಬಲಿಸುತ್ತಾ, ಸಾಮಾಜಿಕ ಮಾಧ್ಯಮಗಳು ಅವರನ್ನು ತಪ್ಪಾಗಿ ಪ್ರತಿನಿಧಿಸುತ್ತಿವೆ ಎಂದು ಆರೋಪಿಸಿದ್ದಾರೆ.

"ಜೈಸುಖ್ ಪಟೇಲ್ ಅವರನ್ನು ಬೆಂಬಲಿಸುವ ಉಮಿಯಾ ಸಿದ್ಸಾರ್ ಟ್ರಸ್ಟ್‌ನ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳಲಿ, ಆದರೆ ಜೈಸುಖ್‌ ಭಾಯ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಎಲ್ಲಾ ಪ್ರತಿಕ್ರಿಯೆಗಳನ್ನು ನಾವು ಖಂಡಿಸುತ್ತೇವೆ. ಮೋರ್ಬಿಯ ಪರಂಪರೆಯನ್ನು ರಕ್ಷಿಸಲು, ಅವರು ಸೇತುವೆಯ ದುರಸ್ತಿ ಕೆಲಸದ ಜವಾಬ್ದಾರಿಯನ್ನು ತೆಗೆದುಕೊಂಡರು” ಎಂದು ಬಿಜೆಪಿ ಮಾಜಿ ಶಾಸಕರು ಹೇಳಿದ್ದಾರೆ.

Similar News