ಮಾರುಕಟ್ಟೆ ನಿಯಂತ್ರಕರು ತಮ್ಮ ಕೆಲಸ ಮಾಡುತ್ತಾರೆ : ಅದಾನಿ ಸಂಸ್ಥೆಗಳ ಕುರಿತು ನಿರ್ಮಲಾ ಸೀತಾರಾಮನ್‌ ಪ್ರತಿಕ್ರಿಯೆ

Update: 2023-02-04 14:15 GMT

ಹೊಸದಿಲ್ಲಿ: ಹಿಂಡೆನ್‌ಬರ್ಗ್‌ ವರದಿ ಬೆನ್ನಲ್ಲಿ ಅದಾನಿ ಸಮೂಹ ಸಂಸ್ಥೆಗಳ ಷೇರು ಮೌಲ್ಯಗಳ ಕುಸಿತದ ಕುರಿತಂತೆ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, "ನಿಯಂತ್ರಕರು ತಮ್ಮ ಕೆಲಸ ಮಾಡುತ್ತಾರೆ. ರಿಸರ್ವ್‌ ಬ್ಯಾಂಕ್‌ ಹೇಳಿಕೆ ನೀಡಿದೆ. ಅದಕ್ಕೂ ಮುಂಚೆ ಎಲ್‌ಐಸಿ ಸಹ ಅದಾನಿ ಸಂಸ್ಥೆಗಳಲ್ಲಿನ ತನ್ನ ಹೂಡಿಕೆ ಮತ್ತು ಬ್ಯಾಂಕುಗಳು ಸಾಲದ ಕುರಿತು ತಿಳಿಸಿವೆ. ಆದುದರಿಂದ ನಿಯಂತ್ರಕರು ತಮ್ಮ ಕೆಲಸ ಮಾಡುತ್ತಾರೆ," ಎಂದು ಮುಂಬೈಯಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಅವರು ಹೇಳಿದರು.

"ನಿಯಂತ್ರಕರು ಸ್ವತಂತ್ರರಾಗಿದ್ದಾರೆ, ಮಾರುಕಟ್ಟೆಯನ್ನು ಸುಸ್ಥಿತಿಯಲ್ಲಿಡಲು ಯಾವುದು ಸರಿ ಅದನ್ನು ಮಾಡಲು ಅವರು ಕ್ರಮಕೈಗೊಳ್ಳುತ್ತಾರೆ. ಸೆಬಿ ಕೂಡ ಪರಿಸ್ಥಿತಿ ಚೆನ್ನಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ," ಎಂದು ಅವರು ಹೇಳಿದರು.

ಅದಾನಿ ಸಂಸ್ಥೆ ತನ್ನ ಎಫ್‌ಪಿಒ ವಾಪಸ್‌ ಪಡೆದ ಕುರಿತ ಪ್ರಶ್ನೆಗೆ ನೇರ ಉತ್ತರ ನೀಡದ ಸಚಿವೆ, "ಎಷ್ಟು ಬಾರಿ ಎಫ್‌ಪಿಒಗಳನ್ನು ದೇಶದಲ್ಲಿ ವಾಪಸ್‌ ಪಡೆದುಕೊಳ್ಳಲಾಗಿದೆ ಹಾಗೂ ಎಷ್ಟು ಬಾರಿ ಅದರಿಂದ ದೇಶದ ವರ್ಚಸ್ಸಿಗೆ ಧಕ್ಕೆಯಾಗಿದೆ? ಮತ್ತು ಎಷ್ಟು ಬಾರಿ ಎಫ್‌ಪಿಒಗಳು ವಾಪಸ್‌ ಬಂದಿಲ್ಲ?" ಎಂದು ಪ್ರಶ್ನಿಸಿದರು.

Similar News