ಉತ್ಪಾದನೆ ಸ್ಥಗಿತಕ್ಕೆ ಗ್ಲೋಬಲ್ ಫಾರ್ಮಾಗೆ ತಮಿಳುನಾಡು ಔಷಧ ನಿಯಂತ್ರಕರು ಸೂಚನೆ

ಅಮೆರಿಕಾದಲ್ಲಿ ಕಣ್ಣಿನ ಡ್ರಾಪ್ಸ್‌ನಿಂದ ಅಡ್ಡಪರಿಣಾಮ

Update: 2023-02-04 17:34 GMT

ಚೆನ್ನೈ, ಫೆ. 4: ಐ ಡ್ರಾಪ್ಸ್ ಕುರಿತ ತನಿಖೆ ಪೂರ್ಣಗೊಳ್ಳುವ ವರೆಗೆ ಕಣ್ಣಿಗೆ ಸಂಬಂಧಿಸಿದ ಎಲ್ಲ 14 ಉತ್ಪನ್ನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ತಮಿಳುನಾಡು ಔಷಧ ನಿಯಂತ್ರಕರು ಚೆನ್ನೈ ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್ಗೆ ಸೂಚಿಸಿದ್ದಾರೆ. 

ಗ್ಲೋಬಲ್ ಫಾರ್ಮಾ ಉತ್ಪಾದನಾ ಘಟಕ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಅಲತ್ತೂರು ಪಟ್ಟಣದಲ್ಲಿ ಇದೆ. ಕಂಪೆನಿ ಆಯಿಂಟ್ಮೆಂಟ್, ಮಾತ್ರೆಗಳು, ಬಾಯಿಯ ಮೂಲಕ ಸೇವಿಸುವ ಔಷಧವನ್ನು ಉತ್ಪಾದಿಸುತ್ತದೆ ಹಾಗೂ 30 ದೇಶಗಳಿಗೆ ರಫ್ತು ಮಾಡುತ್ತದೆ. ಕಣ್ಣಿಗೆ ಸಂಬಂಧಿಸಿದ ಉತ್ಪನ್ನಗಳ ಉತ್ಪಾದನಾ ಘಟಕ ಇತರ ಉತ್ಪನ್ನಗಳ ಉತ್ಪಾದನಾ ಘಟಕಕ್ಕಿಂತ ಪ್ರತ್ಯೇಕವಾಗಿ ಇರುವಂತದ್ದು. ನಾವು ಈಗ ಕಣ್ಣಿಗೆ ಸಂಬಂಧಿಸಿದ ಉತ್ಪನ್ನಗಳ ಉತ್ಪಾದನಾ ಚಟುವಟಿಕೆಯನ್ನು ಮಾತ್ರ ಸ್ಥಗಿತಗೊಳಿಸಿದ್ದೇವೆ ಎಂದು ತಮಿಳುನಾಡು ಔಷಧ ನಿಯಂತ್ರಕರಾದ ಪಿ.ವಿ. ವಿಜಯಲಕ್ಷ್ಮೀ ತಿಳಿಸಿದ್ದಾರೆ. 

ಶುಕ್ರವಾರ ವಿಜಯಲಕ್ಷ್ಮೀ ಸೇರಿದಂತೆ ತಮಿಳುನಾಡು ಔಷಧ ಅಧಿಕಾರಿಗಳ ತಂಡ ಗ್ಲೋಬಲ್ ಫಾರ್ಮಾ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿತ್ತು ಹಾಗೂ ಕಂಟ್ರೋಲ್ ಬ್ಯಾಚ್ (ಪರೀಕ್ಷೆಯ ಅಗತ್ಯ ಬೀಳಬಹುದೆಂದು ಪ್ರತಿ ಬ್ಯಾಚ್ನಿಂದ ಸಂರಕ್ಷಿಸಿ ಇರಿಸಲಾದ ಕೆಲವು ಮಾದರಿಗಳು) ನ ಸಂಪೂರ್ಣವಾಗಿ ಉತ್ಪಾದನೆಯಾದ ಐ ಡ್ರಾಪ್ ಅನ್ನು ಸಂಗ್ರಹಿಸಿತ್ತು. ನಿರ್ದಿಷ್ಟ ಬ್ಯಾಚ್ ಐ ಡ್ರಾಪ್ನ ಉತ್ಪಾದನೆಗೆ ಬಳಸಿದ ಕಚ್ಚಾ ಸಾಮಗ್ರಿಗಳ ಮಾದರಿಗಳನ್ನು ಕೂಡ ಸಂಗ್ರಹಿಸಿತ್ತು. 

‘‘ಈ ಮಾದರಿಗಳನ್ನು ಇಲ್ಲಿನ ಸರಕಾರದ ಪ್ರಯೋಗಾಲಯದಲ್ಲಿ ಆದ್ಯತೆ ನೆಲೆಯಲ್ಲಿ ಪರೀಕ್ಷೆ ನಡೆಸಲಾಗುವುದು’’ ಎಂದು ವಿಜಯಲಕ್ಷ್ಮೀ ಅವರು ತಿಳಿಸಿದ್ದಾರೆ. ಆದರೆ, ಕಂಪೆನಿಯ ಉತ್ಪಾದನೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೇ ನಡೆದಿದೆಯೇ ಎಂಬ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ‘‘ನಾವು ಪ್ರಯೋಗಾಲಯದ ವರದಿ ಕಾಯುತ್ತೇವೆ’’ ಎಂದು ಅವರು ತಿಳಿಸಿದ್ದಾರೆ.

Similar News