ಬೇಡಿಕೆ ಹೆಚ್ಚಿದ್ದಲ್ಲಿ ಎಂನರೇಗಾ ಅನುದಾನ ಏರಿಕೆ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

Update: 2023-02-04 17:37 GMT

ಹೊಸದಿಲ್ಲಿ, ಫೆ.21: ಒಂದು ವೇಳೆ ಬೇಡಿಕೆ ಹೆಚ್ಚಿದ್ದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಎಂನರೇಗಾಕ್ಕೆ ನೀಡುವ ಅನುದಾನವನ್ನು ಹೆಚ್ಚಿಸಲಾಗುವುದೆಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಖಾತೆಯ ಸಚಿವ ಗಿರಿರಾಜ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

‘‘ಎಂನರೇಗಾ ಬೇಡಿಕೆ ಪ್ರೇರಿತ ಯೋಜನೆಯಾಗಿದೆ. ಒಂದು ವೇಳೆ ಬೇಡಿಕೆ ಹೆಚ್ಚಿದ್ದಲ್ಲಿ ನಾವು ಅನುದಾನದಲ್ಲಿ ಏರಿಕೆ ಮಾಡಲಿದ್ದೇವೆ’’ ಎಂದು ಸಿಂಗ್ ತಿಳಿಸಿದ್ದಾರೆ. ‘‘ಬಜೆಟ್ನಲ್ಲಿ ಘೋಷಿಸಲಾದ ಅನುದಾನವು ಒಂದು ಅಂದಾಜಾಗಿದೆ ಹಾಗೂ ಎಂನರೇಗಾಕ್ಕೆ ಸಂಬಂಧಿಸಿದಂತೆ ನೀವು ಹಿಂದಿನ ವರ್ಷಗಳ ಪರಿಷ್ಕೃತ ಅಂದಾಜುಗಳನ್ನು ಗಮನಿಸಿದಲ್ಲಿ ನಾವು ಯಾವಾಗಲೂ ಅನುದಾನವನ್ನು ಹೆಚ್ಚಿಸುತ್ತಲೇ ಬಂದಿರುವುದು ಕಂಡುಬರುತ್ತದೆ’’ಎಂದವರು ಹೇಳಿದರು.

ಎಂನರೇಗಾಗೆ ಬಜೆಟ್ ಅನುದಾನ ಕಡಿತಗೊಳಿಸಿರುವ ವಿಚಾರವಾಗಿ ವಿವಾದವೆಬ್ಬಿಸುವ ಮೂಲಕ ಪ್ರತಿಪಕ್ಷಗಳು ‘ನಾಟಕವಾಡುತ್ತಿವೆ’ ಎಂದು ಸಿಂಗ್ ಟೀಕಿಸಿದರು. ಈ ಮಧ್ಯೆ ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ಪ್ರತ್ಯೇಕ ಹೇಳಿಕೆಯೊಂದನ್ನು ನೀಡಿ, ಎಂನರೇಗಾ ಯೋಜನೆಗೆ ಮಾಡಲಾಗಿರುವ ಬಜೆಟ್ ಅನುದಾನ ಕಡಿತವು ಬೇಡಿಕೆಯ ಮೇರೆಗೆ ಉದ್ಯೋಗವನ್ನು ಒದಗಿಸುವ ಕಾರ್ಯಕ್ರಮದ ಗುರಿಯ ಮೇಲೆ ಪರಿಣಾಮವನ್ನು ಬೀರುವುದಿಲ್ಲವೆಂದು ತಿಳಿಸಿದರು.

ಬಜೆಟ್ನಲ್ಲಿ ಎಂಜಿ ನರೇಗಾದ ಅನುದಾನವನ್ನು 60 ಸಾವಿರ ಕೋಟಿ ರೂ.ಗೆ ಇಳಿಸಲಾಗಿದ್ದು ಇದು ಸರಕಾರದ ಕಳೆದ ನಾಲ್ಕು ಸಾಲಿನ ಬಜೆಟ್ಗಳಲ್ಲಿ ಅತ್ಯಂತ ಕಡಿಮೆಯಾದುದಾಗಿದೆ.

ಎಂನರೇಗಾ ಯೋಜನೆಯಡಿ ಗ್ರಾಮಾಂತರ ಪ್ರದೇಶದ ಜನರಿಗೆ ವರ್ಷಕ್ಕೆ 100 ದಿನಗಳ ಕುಶಲತೆರಹಿತ ಉದ್ಯೋಗವನ್ನು ನೀಡಲಾಗುತ್ತದೆ. ಎಂನರೇಗಾ ಯೋಜನೆಗೆ ಬಜೆಟ್ ನಲ್ಲಿ ಅನುದಾನ ಕಡಿತಗೊಳಿಸಿರುವದುನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಪ್ರಬಲವಾಗಿ ಖಂಡಿಸಿದ್ದಾರೆ. ಬಿಜೆಪಿ ಸರಕಾರ ‘ಬಡವರ ವಿರೋಧಿ’ ಹಾಗೂ ‘ಕಾರ್ಮಿಕ ವಿರೋಧಿ’ ಧೋರಣೆಯನ್ನು ಅನುಸರಿಸುತ್ತಿದೆಯೆಂದವರು ಟೀಕಿಸಿದ್ದಾರೆ.

Similar News