×
Ad

ಪರಂಪರಾಗತ ನಗರದ ಕಲ್ಪನೆಯನ್ನೇ ಬದಲಿಸಲಿರುವ ‘ದಿ ಲೈನ್’

Update: 2023-02-05 10:03 IST

ಸೌದಿ ಅರೇಬಿಯ

ಸೌದಿ ಪ್ರಧಾನ ಮಂತ್ರಿ 
ಮುಹಮ್ಮದ್ ಬಿನ್ ಸಲ್ಮಾನ್ ಅವರ ಕನಸಿನ ಯೋಜನೆಯಾಗಿದೆ ಹೈಟೆಕ್ ನಗರ ನಿಯೋಮ್. ಈ ನಗರದೊಳಗೆ ಬರುವ ಹಲವು ಯೋಜನೆಗಳಲ್ಲಿ ‘ದಿ ಲೈನ್’ ಪ್ರಮುಖವಾದದ್ದು. ಸೌದಿಯ ಅಕಬಾ ತೀರದಲ್ಲಿ 500 ಮೀಟರ್ ಎತ್ತರ, 200 ಮೀಟರ್ ಅಗಲ ಹಾಗೂ 170ಕಿ. ಮೀ. ಉದ್ದದಲ್ಲಿ ಈ ಬೃಹತ್ ವಿನೂತನ ನಗರ ತಲೆ ಎತ್ತಲಿದೆ. ಪರಿಸರ ಸಂರಕ್ಷಣೆಗೆ ಆದ್ಯತೆ ಕೊಡುವ ‘ದಿ ಲೈನ್’ ಯೋಜನೆಯು ಭವಿಷ್ಯದಲ್ಲಿ 90 ಲಕ್ಷ ಮಂದಿಗೆ ವಾಸಯೋಗ್ಯವಾಗಲಿದೆ.

ಸೌದಿ ಅರೇಬಿಯದ ಇತಿಹಾಸವನ್ನೇ ಬದಲಿಸುವಂತಹ, ಅಲ್ಲಿನ ಯುವರಾಜ ಹಾಗೂ ಪ್ರಧಾನ ಮಂತ್ರಿ ಮುಹಮ್ಮದ್ ಬಿನ್ ಸಲ್ಮಾನ್ ಅವರ ಕನಸಿನ ಯೋಜನೆ, ನಿಯೋಮ್ ಯೋಜನೆಯ ಭಾಗವಾದ ‘ದಿ ಲೈನ್’ ಕಟ್ಟಡ ಸಮುಚ್ಚಯಗಳ ಅತ್ಯಾಧುನಿಕ ವಿನ್ಯಾಸವನ್ನು ಕಳೆದ ವರ್ಷವೇ ಸೌದಿ ಅರೇಬಿಯ ಬಿಡುಗಡೆಗೊಳಿಸಿತ್ತು.

500 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯ ಮೂಲಕ 2030ರ ವೇಳೆಗೆ 3 ಲಕ್ಷ 80 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಅದರ ಡ್ರೋನ್ ಕ್ಯಾಮರಾ ದೃಶ್ಯಗಳನ್ನು ಸೌದಿ ಬಿಡುಗಡೆಗೊಳಿಸಿದೆ. 2024ರಲ್ಲಿ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ.

ಸೌದಿ ಪ್ರಧಾನ ಮಂತ್ರಿ ಮುಹಮ್ಮದ್ ಬಿನ್ ಸಲ್ಮಾನ್ ಅವರ ಕನಸಿನ ಯೋಜನೆಯಾಗಿದೆ ಹೈಟೆಕ್ ನಗರ ನಿಯೋಮ್. ಈ ನಗರದೊಳಗೆ ಬರುವ ಹಲವು ಯೋಜನೆಗಳಲ್ಲಿ ‘ದಿ ಲೈನ್’ ಪ್ರಮುಖವಾದದ್ದು. ಸೌದಿಯ ಅಕಬಾ ತೀರದಲ್ಲಿ 500 ಮೀಟರ್ ಎತ್ತರ, 200 ಮೀಟರ್ ಅಗಲ ಹಾಗೂ 170ಕಿ. ಮೀ. ಉದ್ದದಲ್ಲಿ ಈ ಬೃಹತ್ ವಿನೂತನ ನಗರ ತಲೆ ಎತ್ತಲಿದೆ.

ಪರಿಸರ ಸಂರಕ್ಷಣೆಗೆ ಆದ್ಯತೆ ಕೊಡುವ ‘ದಿ ಲೈನ್’ ಯೋಜನೆಯು ಭವಿಷ್ಯದಲ್ಲಿ 90 ಲಕ್ಷ ಮಂದಿಗೆ ವಾಸಯೋಗ್ಯವಾಗಲಿದೆ. ಕೇವಲ 34 ಚದರ ಕಿ.ಮೀ.ವ್ಯಾಪ್ತಿಯಲ್ಲಿ ಮಾತ್ರ ನಿರ್ಮಾಣ ಕಾಮಗಾರಿ ನಡೆಯುವ ಈ ನಗರ ವಿಶ್ವ ದರ್ಜೆಯ ವಿಲಾಸಿ ಜೀವನ ನಡೆಸಲು ಸೂಕ್ತವಾಗಿದೆ.
5 ನಿಮಿಷಗಳ ಕಾಲ್ನಡಿಗೆಯ ದೂರದಲ್ಲೇ ಎಲ್ಲಾ ಅವಶ್ಯಕ ವಸ್ತುಗಳು ಲಭ್ಯವಾಗುವ ರೀತಿಯಲ್ಲಿ ಈ ನಗರ ನಿರ್ಮಾಣವಾಗುತ್ತಿದೆ.

170 ಕಿ.ಮೀ. ಉದ್ದವಿರುವ ಈ ನಗರದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ತಲುಪಲು ಬುಲೆಟ್ ರೈಲು ಓಡಾಡಲಿದೆ. 170 ಕಿ.ಮೀ. ಕ್ರಮಿಸಲು ಕೇವಲ 20 ನಿಮಿಷ ಸಾಕು. ಈ ನಗರದಲ್ಲಿ ರಸ್ತೆಗಳೂ ಇರುವುದಿಲ್ಲ, ಸಾಮಾನ್ಯ ಕಾರುಗಳೂ ಇರುವುದಿಲ್ಲ. ಇಲ್ಲಿನ ವಾಹನಗಳೆಲ್ಲವೂ  ನವೀಕರಿಸಬಹುದಾದ ಇಂಧನ ಬಳಸಿ ಕಾರ್ಯಾಚರಿಸುತ್ತವೆ. ಸೋಲಾರ್,  ವಾಯು ಶಕ್ತಿಯ ವಿದ್ಯುತ್ ಮಾತ್ರ ಬಳಸುವ ಕಾರ್ಬನ್ ರಹಿತ ನಗರವಾಗಿರಲಿದೆ ದಿ ಲೈನ್. ಹೊರಗಿನಿಂದ ಬರುವ ವಾಹನಗಳಿಗೆ ಈ ನಗರಕ್ಕೆ ಪ್ರವೇಶ ಇರುವುದಿಲ್ಲ.

500 ಮೀಟರ್ ಎತ್ತರದ ಈ ನಗರಕ್ಕೆ ಎರಡೂ ಭಾಗಗಳಲ್ಲಿ ಆಕರ್ಷಕ ಗಾಜಿನ ಪರದೆಯಿರುತ್ತವೆ. ರಮಣೀಯವಾದ ಅಕಬಾದ ಚಿತ್ರ ಈ ಗಾಜಿನ ಮೇಲೆ ಪ್ರತಿಫಲಿಸಲಿದೆ. ಎತ್ತರದಲ್ಲಿ ತೂಗುತ್ತಿರುವ ರೀತಿಯಲ್ಲಿ ಮನೆಗಳಿರುತ್ತವೆ. ಜನರ ಜೀವನ, ವಾಸವೆಲ್ಲಾ ಇದರೊಳಗೆ ನಡೆಯಲಿದೆ. ಜಗತ್ತಿನ ಅತ್ಯಂತ ಪರಿಣತಿ ಪಡೆದ ಇಂಜಿನಿಯರ್‌ಗಳು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಜಗತ್ತು ಈವರೆಗೆ ಕಂಡಿರದ ಅಪರೂಪದ ಒಂದು ಕಟ್ಟಡ ಸಮುಚ್ಚಯ ಇದಾಗಲಿದೆ ಎಂದು ಸೌದಿ ಯುವರಾಜ ಜಿದ್ದಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಳೆದ ವರ್ಷ ಹೇಳಿದ್ದರು.

ಇದರ ನಿರ್ಮಾಣಕ್ಕೆ 50 ಸಾವಿರ ಕೋಟಿ ಡಾಲರ್ ಬೇಕು, ಇದರಲ್ಲಿ 20 ಸಾವಿರ ಕೋಟಿ ಡಾಲರ್ ಸೌದಿ ನೇರವಾಗಿ ಪಾವತಿಸಿ, ಉಳಿದದ್ದನ್ನು ಹೂಡಿಕೆದಾರರಿಂದ ಪಡೆಯಲಾಗುತ್ತದೆ.

ಶಾಲೆ, ಶಾಪಿಂಗ್ ಮಾಲ್, ಆಸ್ಪತ್ರೆ, ಮನರಂಜನಾ ವ್ಯವಸ್ಥೆಗಳು ಸೇರಿದಂತೆ ಬೇಕಾದ್ದೆಲ್ಲವೂ ಇದರೊಳಗಿರುತ್ತವೆ.
ಈ ಭಾಗದಲ್ಲಿ ಸೌದಿಯೊಂದಿಗೆ ಗಡಿ ಹಂಚಿಕೊಂಡಿರುವುದು ಜೋರ್ಡಾನ್ ಹಾಗೂ ಈಜಿಪ್ಟ್. ಮಾಲಿನ್ಯ ಮುಕ್ತ ‘ದಿ ಲೈನ್’ ನಗರದ ಯಶಸ್ಸಿಗೆ ಈ ಎರಡೂ ದೇಶಗಳೂ ಕೈ ಜೋಡಿಸಲಿವೆ. ಇಲ್ಲಿಗೆ ಜಗತ್ತಿನ ಅತಿದೊಡ್ಡ ಪ್ರಯಾಣಿಕ ಹಡಗುಗಳಿಗೂ ಪ್ರವೇಶ ಇರುತ್ತದೆ.

ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ‘ವಿಷನ್-2030’ರ ಭಾಗವಿದು. 2017ರಲ್ಲಿ ನಿಯೋಮ್ ಯೋಜನೆಯನ್ನು ಘೋಷಿಸಲಾಗಿತ್ತು. ನಿಯೋಮ್ ಸೌದಿಯ ವಿಶೇಷ ಆರ್ಥಿಕ ವಲಯವಾಗಿ ಬದಲಾಗಲಿದೆ. ಈ ಮೂಲಕ ಜಗತ್ತಿನ ವಿನೋದ ಪ್ರಯಾಣದ ಭೂಪಟದಲ್ಲೇ ಹೊಸ ಇತಿಹಾಸವನ್ನೇ ಬರೆಯಲಿದೆ ಸೌದಿ.
ಹೊಸತು, ಭವಿಷ್ಯ ಎಂಬ ಅರ್ಥ ಬರುವ ಗ್ರೀಕ್ ಅರೇಬಿಕ್ ಪದದಿಂದ ಈ ನಗರಕ್ಕೆ ನಿಯೋಮ್ ಎಂಬ ಹೆಸರಿಡಲಾಗಿದೆ. ಜಗತ್ತಿನ ಶೇ. 40 ಭೂಪ್ರದೇಶಗಳಿಂದ ಜನರು, ಕೇವಲ ನಾಲ್ಕು ತಾಸುಗಳಲ್ಲೇ ನಿಯೋಮ್‌ಗೆ ಬಂದು ತಲುಪಬಹದು.

ಗಲ್ಫ್‌ನ ಇತರ ವಲಯಗಳಿಗಿಂತ ಉಷ್ಣ ಕಡಿಮೆ ಇರುವ ಈ ಪ್ರದೇಶದಲ್ಲಿ ನೂರು ಶೇಕಡಾ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳನ್ನು ಬಳಸಲಾಗುತ್ತದೆ.
ಈವರೆಗಿನ ಪರಂಪರಾಗತ ನಗರದ ಕಲ್ಪನೆಯನ್ನೇ ಸಂಪೂರ್ಣ ಬದಲಿಸಿ ಹೊಸ ಇತಿಹಾಸ ಬರೆಯಲಿರುವ ಭವಿಷ್ಯದ ನಗರವಾಗಿರಲಿದೆ ‘ದಿ ಲೈನ್’

Similar News