ಚೀನಾದೊಂದಿಗೆ ಸಂಪರ್ಕ ಹೊಂದಿರುವ 138 ಜೂಜು, 94 ಸಾಲದ ಆ್ಯಪ್‌ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

Update: 2023-02-05 12:51 GMT

ಹೊಸದಿಲ್ಲಿ: ತುರ್ತು ಆಧಾರದಲ್ಲಿ ಚೀನಾದೊಂದಿಗೆ ಸಂಪರ್ಕ ಹೊಂದಿರುವ 138 ಜೂಜು ಹಾಗೂ 94 ಸಾಲದ ಆ್ಯಪ್‌ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ ಎಂದು News18.com ವರದಿ ಮಾಡಿದೆ.

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯವು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸಂದೇಶ ರವಾನಿಸಿತ್ತು.

ಆರು ತಿಂಗಳ ಹಿಂದೆ 28 ಚೀನಾ ಮೂಲದ ಸಾಲದ ಆ್ಯಪ್‌ಗಳ ಕುರಿತು ಕೇಂದ್ರ ಗೃಹ ಸಚಿವಾಲಯ ವಿಶ್ಲೇಷಣೆ ಆರಂಭಿಸಿತ್ತು. ಹೀಗಿದ್ದೂ, ಇ-ಸ್ಟೋರ್‌ಗಳಲ್ಲಿ 94 ಆ್ಯಪ್‌ಗಳು ಲಭ್ಯವಿದ್ದು, ಮತ್ತೆ ಕೆಲವು ಮೂರನೆಯ ಸಂಪರ್ಕ ಕೊಂಡಿಯ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು.

ಇಂತಹ ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ತೆಲಂಗಾಣ, ಒಡಿಶಾ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರ ಅಡಿ ಈ ಆ್ಯಪ್‌ಗಳು "ಭಾರತದ ಸಾರ್ವಭೌಮತೆ ಹಾಗೂ ಏಕತೆಗೆ ಧಕ್ಕೆ ಉಂಟು ಮಾಡುವುದು" ದೃಢಪಟ್ಟಿದ್ದರಿಂದ ಅವುಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ.

ಇನ್ನು ಮುಂದೆ ಹಲವಾರು ಆ್ಯಪ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ, ಜೂಜು ಆ್ಯಪ್‌ಗಳನ್ನು ಸ್ವತಂತ್ರ ಕೊಂಡಿಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಮತ್ತು ನೇರವಾಗಿ ಆನ್‌ಲೈನ್‌ನಲ್ಲೇ ಆಡಬಹುದಾಗಿದೆ. ಈ ಪೈಕಿ ಕೆಲವು ಆ್ಯಪ್‌ಗಳು ಕ್ರಿಪ್ಟೊಕರೆನ್ಸಿಯನ್ನೂ ಸ್ವೀಕರಿಸುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.

Similar News