ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯ 3 ಲಕ್ಷ ಡೋಸ್ ಗಳನ್ನು ಆಸ್ಪತ್ರೆಗಳಿಗೆ ರವಾನಿಸಲಾಗಿದೆ: ಭಾರತ್ ಬಯೋಟೆಕ್

Update: 2023-02-05 17:08 GMT

ಹೊಸದಿಲ್ಲಿ, ಫೆ. 5: ಭಾರತ್ ಬಯೋಟೆಕ್ ತನ್ನ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯ 3 ಲಕ್ಷ ಡೋಸ್ಗಳನ್ನು ಕೆಲವು ಆಸ್ಪತ್ರೆಗಳಿಗೆ 2 ದಿನಗಳ ಹಿಂದೆ ರವಾನಿಸಿದೆ ಎಂದು ಕಂಪೆನಿಯ ಕಾರ್ಯಾಧ್ಯಕ್ಷ ಕೃಷ್ಣ ಎಲ್ಲಾ ಅವರು ರವಿವಾರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಯುಡಬ್ಲು- ಮೆಡಿಸನ್ ಒನ್ ಹೆಲ್ತ್ ಸೆಂಟರ್ ಸ್ಥಾಪಿಸಲು ಯುನಿವರ್ಸಿಟಿ ಆಫ್ ವಿಸ್ಕೋನ್ಸಿನ್ (ಯುಡಬ್ಲು)-ಮೆಡಿಸನ್ ಗ್ಲೋಬಲ್ ಹೆಲ್ತ್ ಇನ್ಸ್ಟಿಟ್ಯೂಟ್ (ಜಿಎಚ್ಐ) ಹಾಗೂ ದಿ ಎಲ್ಲಾ ಫೌಂಡೇಶನ್ ನಡುವಿನ ಬಹುಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ಕಾರ್ಯಕ್ರಮದ ನೇಪಥ್ಯದಲ್ಲಿ ಅವರು ಈ ಮಾಹಿತಿ ನೀಡಿದರು.

 ಜಗತ್ತಿನ ಮೊದಲ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ಇನ್ಕೊವ್ಯಾಕ್ ಅನ್ನು ಜನವರಿ 26ರಂದು ಆರಂಭಿಸಲಾಗಿತ್ತು. ಈ ಲಸಿಕೆ ಈಗ ಕೋವಿನ್ನಲ್ಲಿ ಲಭ್ಯವಿದೆ. ಈ ಲಸಿಕೆಗೆ ಖಾಸಗಿ ಮಾರುಕಟ್ಟೆಯಲ್ಲಿ 800 ರೂಪಾಯಿ ಹಾಗೂ ಕೇಂದ್ರ, ರಾಜ್ಯ ಸರಕಾರಕ್ಕೆ 325 ರೂಪಾಯಿಯಲ್ಲಿ ಲಭ್ಯವಿದೆ. ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಗಾಗಿ ಕೆಲವು ದೇಶಗಳು ಹಾಗೂ ಅಂತರ್ ರಾಷ್ಟ್ರೀಯ ಏಜೆನ್ಸಿಗಳು ಕಂಪೆನಿಯನ್ನು ಸಂಪರ್ಕಿಸಿವೆ ಎಂದು ಅವರು ತಿಳಿಸಿದ್ದಾರೆ.

 ಬೆಂಗಳೂರಿನಲ್ಲಿ ಯುಡಬ್ಲು-ಮೆಡಿಸನ್ ಒನ್ ಹೆಲ್ತ್ ಸೆಂಟರ್ 2023ರ ಅಂತ್ಯಕ್ಕೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ ಎಂದು ಎಲ್ಲಾ ಅವರು ತಿಳಿಸಿದ್ದಾರೆ.

Similar News