ಕೆರೋ ವಿಶ್ವಕಪ್: ಅಗ್ರ ಶೂಟರ್‌ಗಳಿಗೆ ಯೋಗ್ಯ ವಸತಿ ವ್ಯವಸ್ಥೆ ಕಲ್ಪಿಸದ ಎನ್‌ಆರ್‌ಎಐ

Update: 2023-02-05 18:19 GMT

ಹೊಸದಿಲ್ಲಿ, ಫೆ.5: ಈ ತಿಂಗಳ ಅಂತ್ಯದಲ್ಲಿ ಕೈರೋ ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಭಾರತದ ಅಗ್ರ ಶೂಟರ್‌ಗಳು ಹಾಗೂ ತರಬೇತುದಾರರು ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಫರೀದಾಬಾದ್‌ನಲ್ಲಿ ತಮಗೆ ಯೋಗ್ಯವಾದ ವಸತಿ ಸೌಕರ್ಯವನ್ನು ಒದಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸುಮಾರು 70 ಶೂಟರ್‌ಗಳು ಹಾಗೂ ತರಬೇತುದಾರರಿಗೆ ಎರಡು ಸಾಧಾರಣ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿದೆ. ಈಗ ನಡೆಯುತ್ತಿರುವ ‘ಸೂರಜ್‌ಕುಂಡ್ ಮೇಳ’ದಿಂದಾಗಿ ಎಲ್ಲಾ ‘ಉತ್ತಮ’ ಹೋಟೆಲ್‌ಗಳನ್ನು ಬುಕ್ ಮಾಡಲಾಗಿತ್ತು ಎಂದು NRAI ಅಧಿಕಾರಿಗಳು ಹೇಳಿದ್ದಾರೆ.

‘‘ಶೂಟರ್‌ಗಳು ಕಳಪೆ ವಸತಿ ಹಾಗೂ ಆಹಾರದ ಬಗ್ಗೆ ದೂರು ನೀಡಿದ್ದಾರೆ. ಕೆಲವರು ತಮ್ಮ ಕೊಠಡಿಗಳಲ್ಲಿ ಇಲಿಗಳ ಕಾಟ ಎದುರಿಸಿದರೆ, ಇನ್ನು ಕೆಲವರು ಊಟದ ಸ್ಥಳದಲ್ಲಿ ಜಿರಳೆಗಳಿಂದ ಸಮಸ್ಯೆ ಎದುರಿಸಿದ್ದರು’’ಎಂದು ಮೂಲಗಳು ತಿಳಿಸಿವೆ.

 ಫರೀದಾಬಾದ್‌ನಲ್ಲಿ ರಾತ್ರಿಯ ತಾಪಮಾನವು 10-13 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವುದರೊಂದಿಗೆ ಶೂಟರ್‌ಗಳು ಹವಾಮಾನ ವೈಪರೀತ್ಯವನ್ನು ಎದುರಿಸಬೇಕಾಯಿತು. ’’ಬಾಟಲ್ ಕುಡಿಯುವ ನೀರಿನ ಕೊರತೆ ಇತ್ತು. ಹಾಸಿಗೆ ನೋಡಿದರೆ ಭಯವಾಗುತ್ತಿತ್ತು. ಶುಚಿತ್ವ ಕಳಪೆಯಾಗಿತ್ತು. ಕೋಣೆಯಲ್ಲಿ ಹೀಟರ್ ಇಲ್ಲದೇ ಪರದಾಟ ನಡೆಸುವಂತಾಗಿತ್ತು’’ ಎಂದು ಶೂಟರ್ ವೊಬ್ಬರು ದೂರಿದರು.

ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಶಿಬಿರಾರ್ಥಿಗಳಿಗೆ ವಸತಿ ಕಲ್ಪಿಸಿದ್ದರೆ ಈ ಯಾವುದೇ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ಎಂದು ಮಾಜಿ ಶೂಟರ್‌ಗಳು ಹೇಳಿದರು.

ರಾಷ್ಟ್ರೀಯ ಶಿಬಿರಾರ್ಥಿಗಳಿಗೆ ಅವಕಾಶ ಕಲ್ಪಿಸಲು ವ್ಯಾಪ್ತಿಯಲ್ಲಿ ಸಾಕಷ್ಟು ಕೊಠಡಿಗಳಿವೆ ಆದರೆ ಸಮಸ್ಯೆಯೆಂದರೆ ಅದು ಯಾವಾಗಲೂ ಖೇಲೋ ಇಂಡಿಯಾ ಮತ್ತು ಎನ್ ಸಿ ಒಇ ತರಬೇತಿದಾರರಿಂದ ತುಂಬಿರುತ್ತದೆ, ಅವರಲ್ಲಿ ಹಲವರು ಖಾಯಂ ನಿವಾಸಿಗಳು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಇದನ್ನು ಪರಿಶೀಲಿಸಬೇಕು ಹಾಗೂ ಅವರಿಗೆ ಕೊಠಡಿಗಳನ್ನು ನಿರ್ಬಂಧಿಸಬೇಕು’’ಎಂದು ಅವರು ಹೇಳಿದರು.

Similar News