ಉಡುಪಿ: ಅದಾನಿ ಪ್ರಕರಣ ತನಿಖೆಗೆ ಆಗ್ರಹಿಸಿ ಎಲ್‌ಐಸಿ ಕಚೇರಿ ಎದುರು ಕಾಂಗ್ರೆಸ್ ಧರಣಿ

Update: 2023-02-06 06:41 GMT

ಉಡುಪಿ, ಫೆ.6: ಅದಾನಿ ವ್ಯವಹಾರದ ವಿರುದ್ಧ ಹಿಂಡನ್ ಬರ್ಗ್ ವರದಿಯ ಸಮಗ್ರ ತನಿಖೆಗೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸೋಮವಾರ ಉಡುಪಿ ಅಜ್ಜರಕಾಡುವಿನಲ್ಲಿರುವ ಎಲ್‌ಐಸಿ ಕಚೇರಿ ಎದುರು ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಈ ದೇಶದಲ್ಲಿ ಒಟ್ಟು 29 ಮಂದಿ ಬ್ಯಾಂಕ್‌ಗಳಿಂದ 10 ಲಕ್ಷ ಕೋಟಿ ರೂ. ಹಣವನ್ನು ದೋಚಿಸಿದ್ದಾರೆ. ಇದರಲ್ಲಿ ವಿಜಯ ಮಲ್ಯ ಒಬ್ಬರು ಬಿಟ್ಟರೇ ಉಳಿದವರೆಲ್ಲರೂ ಗುಜರಾತಿಗಳೇ ಆಗಿದ್ದಾರೆ. ಇವರೆಲ್ಲ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ದೇಶದ ಹಣವನ್ನು ದೋಚುವುದು ಕೂಡ ಒಂದು ರೀತಿಯಲ್ಲಿ ಉಗ್ರವಾದ ಆಗಿದೆ. ಆದುದರಿಂದ ಸರಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸ ಬೇಕು ಎಂದು ಆಗ್ರಹಿಸಿದರು.

ನಮ್ಮ ಹೋರಾಟ ಎಲ್‌ಐಸಿ ವಿರುದ್ಧ ಅಲ್ಲ. ಎಲ್‌ಐಸಿಗೆ ಆಗಿರುವ ಅನ್ಯಾಯಕ್ಕಾಗಿ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಕೆಲವು ಮಂದಿ ಸೇರಿ ದೇಶದ ಬ್ಯಾಂಕ್‌ಗಳನ್ನು ಲೂಟಿ ಮಾಡುತ್ತಿದ್ದಾರೆ. ದೇಶದ 12 ಕೋಟಿ ಯುವಜನತೆ ನಿರುದ್ಯೋಗಿಗಳಾಗಿ ಪರಿತಪಿಸುತ್ತಿದ್ದಾರೆ. ಕೇಂದ್ರ ಸರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಜನರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಪ್ಯಾನಲಿಸ್ಟ್ ವರೋನಿಕಾ ಕರ್ನೆಲಿಯೋ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕುಶಲ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಹರೀಶ್ ಕಿಣಿ, ಅಣ್ಣಯ್ಯ ಶೇರಿಗಾರ್, ಪ್ರಖ್ಯಾತ್ ಶೆಟ್ಟಿ, ನರಸಿಂಹ ಮೂರ್ತಿ, ದಿನೇಶ್ ಪುತ್ರನ್, ಶಬ್ಬೀರ್ ಅಹ್ಮದ್, ಗೀತಾ ವಾಗ್ಳೆ, ರೋಶನಿ ಒಲಿವೇರಾ, ದೀಪಕ್ ಕೋಟ್ಯಾನ್, ಸೌರಭ್ ಬಲ್ಲಾಳ್, ವಿಜಯ ಪೂಜಾರಿ, ಲೂವಿಸ್ ಲೋಬೊ, ಕೀರ್ತಿ ಶೆಟ್ಟಿ, ಗಣೇಶ್ ನೆರ್ಗಿ, ಹರೀಶ್ ಶೆಟ್ಟಿ ಪಾಂಗಾಳ ಮೊದಲಾದವರು ಉಪಸ್ಥಿತರಿದ್ದರು.

Similar News