ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಿದ ಬಳಿಕ ಗೆಳೆಯನಿಗೆ ವಿಡಿಯೋ ಕರೆ ಮಾಡಿದ 'ಮೃತ' ವ್ಯಕ್ತಿ!

Update: 2023-02-06 12:44 GMT

ಪಾಲ್ಘರ್: ಸತ್ತಿದ್ದಾರೆಂದು ತಿಳಿಯಲಾಗಿದ್ದ ಹಾಗೂ ಕುಟುಂಬಸ್ಥರಿಂದ ಅಂತ್ಯಕ್ರಿಯೆ ಕೂಡ ನೆರವೇರಿಸಲ್ಪಟ್ಟಿದ್ದ 60 ವರ್ಷದ ಆಟೋರಿಕ್ಷಾ ಚಾಲಕರೊಬ್ಬರು ಮಹಾರಾಷ್ಟ್ರದ (Maharashtra) ಪಾಲ್ಘರ್‌ ಜಿಲ್ಲೆಯಲ್ಲಿ ಜೀವಂತವಾಗಿ ಪತ್ತೆಯಾದ ಘಟನೆ ವರದಿಯಾಗಿದೆ. ಚಾಲಕ ಪಾಲ್ಘರ್‌ನ ಅನಾಥಾಲಯದಲ್ಲಿರುವುದು ಪತ್ತೆಯಾಗಿದೆಯಲ್ಲದೆ  ಆತ ತನ್ನ ಸ್ನೇಹಿತನೊಂದಿಗೆ ನಡೆಸಿದ ವೀಡಿಯೋ ಕಾಲ್‌ ತುಣುಕು ವೈರಲ್‌ ಆಗಿದೆ.

ಜನವರಿ 29 ರಂದು ಬೊಯ್ಸರ್‌ ಮತ್ತು ಪಾಲ್ಘರ್‌ ರೈಲು ನಿಲ್ದಾಣಗಳ ನಡುವಿನ ಹಳಿಯನ್ನು ದಾಟುವ ವೇಳೆ ರೈಲು ಬಡಿದು ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈತನ ಚಿತ್ರವನ್ನು ರೈಲ್ವೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ನಂತರ ಪಾಲ್ಘರ್‌ನ ವ್ಯಕ್ತಿಯೊಬ್ಬ ಪೊಲೀಸರಿಗೆ ಕರೆ ಮಾಡಿ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ತನ್ನ ಸೋದರ ರಫೀಖ್‌ ಶೇಖ್‌ ಈ ವ್ಯಕ್ತಿ ಎಂದು ಹೇಳಿದ್ದ. ಕುಟುಂಬ ನಾಪತ್ತೆ ದೂರು ಕೂಡ ದಾಖಲಿಸಿತ್ತು.

ನಂತರ ಪೊಲೀಸರು ಕೇರಳದಲ್ಲಿದ್ದ 'ಮೃತ' ವ್ಯಕ್ತಿಯ ಪತ್ನಿಯನ್ನು ಸಂಪರ್ಕಿಸಿದ್ದರು. ಆಕೆ ಬಂದು ಮೃತದೇಹವನ್ನು ಗುರುತಿಸಿದ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ನಂತರ ಅಂತ್ಯಕ್ರಿಯೆ ನಡೆದಿತ್ತು.

ಆದರೆ ರವಿವಾರ ಶೇಖ್‌ ಸ್ನೇಹಿತನೊಬ್ಬ ಆತನ ಸಂಖ್ಯೆಗೆ ಕರೆ ಮಾಡಿದಾಗ ಅತ್ತ ಕಡೆಯಿಂದ ಪ್ರತಿಕ್ರಿಯಿಸಿದ್ದ. ತಾನು ಚೆನ್ನಾಗಿರುವುದಾಗಿಯೂ ಶೇಖ್‌ ತನ್ನ ಸ್ನೇಹಿತನಿಗೆ ತಿಳಿಸಿದ್ದ. ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಶೇಖ್‌ ಕುಟುಂಬಕ್ಕೂ ತಿಳಿದು ಬಂದು ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸರ ಪ್ರಕಾರ ಒಂದೆರಡು ತಿಂಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ರಫೀಖ್‌ ಪಾಲ್ಘರ್‌ನ ಸಫಲ ಎಂಬಲ್ಲಿನ ಅನಾಥಾಲಯಕ್ಕೆ ಸೇರಿದ್ದ.

ಹಾಗಿದ್ದರೆ ಕುಟುಂಬ ಅಂತ್ಯಕ್ರಿಯೆ ನಡೆಸಿದ್ದ ವ್ಯಕ್ತಿ ಯಾರೆಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕ್ಲಿನಿಕ್‌ನಲ್ಲಿ ತಪ್ಪು ಚುಚ್ದು ಮದ್ದು ನೀಡಿದ್ದರಿಂದ ಮಹಿಳೆ ಮೃತ್ಯು: ಆರೋಪಿಯ ಬಂಧನ

Similar News