ಚೀನಾದ 6 ಸಾವಿರ ಪರದೆಗಳಲ್ಲಿ ಬಿಡುಗಡೆಯಾಗಲು ಸಜ್ಜಾದ ನಟಿ ಶ್ರೀದೇವಿ ಅಭಿನಯದ 'ಇಂಗ್ಲಿಷ್ ವಿಂಗ್ಲಿಷ್'

13 ವರ್ಷಗಳ ಬಳಿಕ ಮತ್ತೊಮ್ಮೆ ತೆರೆ ಕಾಣಲಿರುವ ಬಾಲಿವುಡ್ ಚಿತ್ರ

Update: 2023-02-06 13:21 GMT

ಮುಂಬೈ/ಬೀಜಿಂಗ್: ಬಿಡುಗಡೆಯಾಗಿ ಬರೋಬ್ಬರಿ 13 ವರ್ಷಗಳ ಬಳಿಕ ಬಾಲಿವುಡ್ ನ  'ಇಂಗ್ಲಿಷ್ ವಿಂಗ್ಲಿಷ್' ಚೀನಾದಲ್ಲಿ ಮತ್ತೊಮ್ಮೆ ತೆರೆ ಕಾಣಲು ಸಜ್ಹಾಗಿದೆ. ಖ್ಯಾತ ನಟಿ, ದಿವಂಗತ ಶ್ರೀದೇವಿ ಅವರು ಅಭಿನಯಿಸಿರು ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು, ಅಲ್ಲದೆ ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. 

ಶ್ರೀದೇವಿಯವರ 5ನೇ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ಚೀನಾದಲ್ಲಿ ಚಿತ್ರ ಬಿಡುಗಡೆ ಆಗಲಿದ್ದು, ಬರೋಬ್ಬರಿ 6000 ಪರದೆಗಳಲ್ಲಿ ಪ್ರದರ್ಶನ ಕಾಣಲಿದೆ ಎಂದು ಚಿತ್ರದ ವಿತರಕ ಸಂಸ್ಥೆ ಎರೋಸ್ ಇಂಟರ್‌ನ್ಯಾಷನಲ್ ತಿಳಿಸಿದೆ. 

ಕೌಟುಂಬಿಕ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಗೌರಿ ಶಿಂದೆ ನಿರ್ದೇಶನ ಮಾಡಿದ್ದರು. 15 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಶ್ರೀದೇವಿ ಈ ಚಿತ್ರದ ಮೂಲಕ ಮರಳಿ ಸಿನಿಲೋಕಕ್ಕೆ ಬಂದಿದ್ದರು.

ಚೀನಾದ ಚಲನಚಿತ್ರ ಮಾರುಕಟ್ಟೆಯಲ್ಲಿ ಭಾರತದ ಚಿತ್ರಗಳು ಕೂಡಾ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈ ಹಿಂದೆ ಆಮಿರ್ ಖಾನ್ ಅಭಿನಯದ 'ದಂಗಲ್' ಚಿತ್ರ ಭಾರೀ ಯಶಸ್ಸನ್ನು ಪಡೆದುಕೊಂಡಿತ್ತು.

Similar News