ನೀವು ದ್ವೇಷದ ಅಪರಾಧವನ್ನು ನಿರ್ಲಕ್ಷಿಸಿದರೆ, ಒಂದು ದಿನ ನೀವೇ ಅದಕ್ಕೆ ಗುರಿಯಾಗುತ್ತೀರಿ: ಸುಪ್ರೀಂ ಕೋರ್ಟ್‌

ಪ್ರಕರಣ ದಾಖಲಿಸಲು ವಿಳಂಬಿಸಿದ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ ನ್ಯಾಯಾಲಯ

Update: 2023-02-06 16:16 GMT

ಹೊಸದಿಲ್ಲಿ: 2021 ರಲ್ಲಿ ನೋಯ್ಡಾದಲ್ಲಿ ನಡೆದ ದ್ವೇಷದ ಅಪರಾಧಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಲು ವಿಳಂಬಗೊಳಿಸಿರುವುದನ್ನು ಸುಪ್ರೀಂ ಕೋರ್ಟ್‌(Supreme Court) ಟೀಕಿಸಿದೆ. 

ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್(KM Joseph) ಮತ್ತು ಬಿವಿ ನಾಗರತ್ನ(B. V. Nagarathna) ಅವರ ಪೀಠವು ದೂರಿನ ಪ್ರತಿಗಳನ್ನು ಹಾಜರುಪಡಿಸುವಂತೆ ಹಾಗೂ ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆಯೇ ಎಂಬ ಮಾಹಿತಿಯನ್ನು ನೀಡುವಂತೆ ರಾಜ್ಯ ಅಧಿಕಾರಿಗಳಿಗೆ ಸೂಚಿಸಿದೆ ಎಂದು barandbench.com ವರದಿ ಮಾಡಿದೆ.

ರಾಜ್ಯದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಕೆ.ಎಂ.ನಟರಾಜ್(K. M. Nataraj) ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಜೋಸೆಫ್, ಇಂತಹ ದ್ವೇಷದ ಅಪರಾಧಗಳನ್ನು ಬೇರು ಸಮೇತ ಕಿತ್ತು ಹಾಕುವುದು ಜಾತ್ಯತೀತ ರಾಜ್ಯದ ಕರ್ತವ್ಯ ಎಂದು ಹೇಳಿದ್ದಾರೆ.

ನೀವು ದ್ವೇಷದ ಅಪರಾಧವನ್ನು ನಿರ್ಲಕ್ಷಿಸಿದರೆ, ಒಂದು ದಿನ ನೀವೇ ಅದಕ್ಕೆ ಗುರಿಯಾಗುತ್ತೀರಿ ಎಂದು ನ್ಯಾಯಾಧೀಶರು ಹೇಳಿದ್ದಾರೆ. 

"ಅವರು ತಮ್ಮ ಧರ್ಮವನ್ನು ಪ್ರತಿನಿಧಿಸುವ ಟೋಪಿಯನ್ನು ಧರಿಸಿದ್ದರು ಎಂದು ಹೇಳಲಾಗುತ್ತದೆ. ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದ ಮೇಲೆ ದ್ವೇಷದ ಅಪರಾಧಕ್ಕೆ ಜಾಗವಿಲ್ಲ; ಅದನ್ನು ಬೇರು ಸಹಿತ ಕಿತ್ತುಹಾಕಬೇಕು. ರಾಜ್ಯ(ಸರ್ಕಾರ)ವು ಇಚ್ಛಾಶಕ್ತಿಯನ್ನು ಹೊಂದಿದರೆ ಅದು ಕೊನೆಗೊಳ್ಳುತ್ತದೆ. ಇದು ರಾಜ್ಯದ ಆದ್ಯ ಕರ್ತವ್ಯವಾಗಿದೆ.  ಇಂತಹ ಅಪರಾಧಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದೇ ಇದ್ದರೆ, ಅದು ಅಂತಹ ಕೃತ್ಯಗಳನ್ನು ಆದರಿಸುವ ವಾತಾವರಣ ನಿರ್ಮಾಣವಾಗುತ್ತದೆ. ಅದು ಅಪಾಯಕಾರಿ ಸಮಸ್ಯೆಯಾಗಿದೆ” ಎಂದು ಪೀಠವು ಹೇಳಿದೆ. 

"ದ್ವೇಷದ ಅಪರಾಧ ನಡೆದಿದೆ, ಆದರೆ, ಅದನ್ನು ನೀವು ಮುಚ್ಚಿ ಹಾಕಲು ನೋಡುತ್ತೀರಿ ಎಂದು ನೀವು ಒಪ್ಪಿಕೊಳ್ಳುವುದಿಲ್ಲವೇಕೆ? ನಾನು ಪ್ರತಿಕೂಲವಾದ ಏನನ್ನೂ ಹೇಳುತ್ತಿಲ್ಲ; ನಾವು ನಮ್ಮ ದುಃಖವನ್ನು ಮಾತ್ರ ವ್ಯಕ್ತಪಡಿಸುತ್ತೇವೆ. ಅದು ಅಲ್ಪಸಂಖ್ಯಾತರಾಗಿರಲಿ ಅಥವಾ ಬಹುಸಂಖ್ಯಾತರಾಗಿರಲಿ, ಮಾನವನಲ್ಲಿ ಅಂತರ್ಗತವಾಗಿರುವ ಕೆಲವು ಹಕ್ಕುಗಳಿವೆ. ನೀವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು." ಎಂದು ಪೀಠವು ಹೇಳಿದೆ. 

ದ್ವೇಷ ಭಾಷಣದ ಘಟನೆಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

Similar News