ಅದಾನಿ ಕುರಿತ ಚರ್ಚೆಯನ್ನು ತಪ್ಪಿಸಲು ಪ್ರಧಾನಿ ಮೋದಿ ಎಲ್ಲ ಪ್ರಯತ್ನ ಮಾಡಲಿದ್ದಾರೆ:ರಾಹುಲ್ ಗಾಂಧಿ

Update: 2023-02-06 17:42 GMT

ಹೊಸದಿಲ್ಲಿ,ಫೆ.6: ಅದಾನಿ(Adani) ವಿವಾದ ಕುರಿತು ಚರ್ಚೆಯನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದಾರೆ ಎಂದು ಸೋಮವಾರ ಇಲ್ಲಿ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಯವರು,ಈ ಹಂತದಲ್ಲಿ ಅದಾನಿ ಗ್ರೂಪ್ ಮತ್ತು ಅದರ ವಿರುದ್ಧ ವಂಚನೆ ಆರೋಪ ಮಾಡಿರುವ ಹಿಂಡನ್‌ಬರ್ಗ್ ವರದಿಯ ಕುರಿತು ಸಂಸತ್ತಿನಲ್ಲಿ ವಿವರವಾದ ಚರ್ಚೆಯಾಗಬೇಕು ಎಂದು ಒತ್ತಿ ನುಡಿದರು.

‘ಜನರಿಗೆ ಸತ್ಯ ತಿಳಿಯುವಂತಾಗಲು ನಾನು ಕಳೆದೆರಡು ವರ್ಷಗಳಿಂದ ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದ್ದೇನೆ. ಕೋಟ್ಯಂತರ ರೂ.ಗಳ ಭ್ರಷ್ಟಾಷಾರ ನಡೆದಿದೆ ಮತ್ತು ಓರ್ವ ವ್ಯಕ್ತಿಯು ದೇಶದ ಮೂಲಸೌಕರ್ಯವನ್ನು ಹೈಜಾಕ್ ಮಾಡಿದ್ದಾರೆ ’ ಎಂದು ಹೇಳಿದ ರಾಹುಲ್,‘ಅದಾನಿ ಗ್ರೂಪ್‌ನ ಹಿಂದಿರುವ ಶಕ್ತಿಗಳು ಯಾರು ಎನ್ನುವುದು ನಮಗೆ ತಿಳಿಯಬೇಕಿದೆ. ಕೇಂದ್ರವು ಹೆದರಿದೆ ಮತ್ತು ಈ ವಿಷಯದಲ್ಲಿ ಚರ್ಚೆಯನ್ನು ಬಯಸುತ್ತಿಲ್ಲ. ಅದಾನಿ ಕುರಿತು ಯಾವುದೇ ಚರ್ಚೆ ನಡೆಯದಂತೆ ಮೋದಿಯವರು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ ’ ಎಂದರು.

ಇದಕ್ಕೂ ಮುನ್ನ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು,ಅದಾನಿಯವರ ಸಂಪತ್ತಿನ ಗುಳ್ಳೆ ಒಡೆಯಲಿದೆ ಎಂದು ರಾಹುಲ್ ಗಾಂಧಿಯವರು ಭವಿಷ್ಯ ನುಡಿದಿದ್ದರು ಮತ್ತು ಹಿಂಡನ್‌ಬರ್ಗ್ ಅದಾನಿಯವರನ್ನು ಬಯಲಿಗೆಳೆದಿದೆ ಎಂದು ಹೇಳಿದ್ದರು.

ಉಭಯ ಸದನಗಳ ಮುಂದೂಡಿಕೆ :

ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಚರ್ಚೆಗೆ ಕೇಂದ್ರವು ನಿರಾಕರಿಸಿದ ಬಳಿಕ ಮೂರನೇ ದಿನವಾದ ಸೋಮವಾರವೂ ಸಂಸತ್ತಿನ ಉಭಯ ಸದನಗಳನ್ನು ಮುಂದೂಡಲಾಯಿತು. ಅದಾನಿ ಗ್ರೂಪ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಕುರಿತು ಚರ್ಚೆಗೆ ಸರಕಾರವು ಒಪ್ಪುವವರೆಗೂ ತಾನು ದೇಶವ್ಯಾಪಿ ಪ್ರತಿಭಟನೆಗಳನ್ನು ನಡೆಸುವುದಾಗಿ ಪ್ರತಿಪಕ್ಷವು ಹೇಳಿತ್ತು.

ಸೋಮವಾರ ಕಾಂಗ್ರೆಸ್ ದೇಶಾದ್ಯಂತ ಎಲ್‌ಐಸಿ ಕಚೇರಿಗಳು ಮತ್ತು ಎಸ್‌ಬಿಐ ಶಾಖೆಗಳ ಮುಂದೆ ಪ್ರತಿಭಟನೆಗಳನ್ನು ನಡೆಸಿತು. ಕಾಂಗ್ರೆಸ್ ಸಂಸದರು ಸಂಸತ್ ಭವನದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆಗಳನ್ನು ನಡೆಸಿದರು.

Similar News