ಐಎನ್‌ಎಸ್ ವಿಕ್ರಾಂತ್ ಮೇಲೆ ಯಶಸ್ವಿಯಾಗಿ ಇಳಿದ ನೌಕಾಪಡೆಯ ಲಘು ಯುದ್ಧ ವಿಮಾನ

Update: 2023-02-06 17:06 GMT

ಹೊಸದಿಲ್ಲಿ,ಫೆ.6: ಮಹತ್ವದ ಸಾಧನೆಯೊಂದರಲ್ಲಿ ನೌಕಾಪಡೆಯ ಲಘು ಯುದ್ಧವಿಮಾನ (LCA)ವು ಸೋಮವಾರ ಅರಬಿ ಸಮುದ್ರದಲ್ಲಿ ಸಾಗುತ್ತಿದ್ದ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನ ಡೆಕ್‌ನ ಮೇಲೆ ಯಶಸ್ವಿಯಾಗಿ ಇಳಿದಿದೆ. ಐಎನ್‌ಎಸ್ ವಿಕ್ರಾಂತ್‌ನ ಮೇಲೆ ಎಲ್‌ಸಿಎ ಇಳಿದಿರುವುದು ಇದೇ ಪ್ರಥಮವಾಗಿದೆ.

2020,ಜನವರಿಯಲ್ಲಿ ನೌಕಾಪಡೆಯ ಎಲ್‌ಸಿಎ ಐಎನ್‌ಎಸ್ ವಿಕ್ರಮಾದಿತ್ಯದ ಮೇಲೆ ಯಶಸ್ವಿ ಲ್ಯಾಂಡಿಂಗ್ ಮಾಡಿತ್ತು.ಐಎನ್‌ಎಸ್ ವಿಕ್ರಾಂತ್‌ನ ಡೆಕ್ ಮೇಲೆ ಯುದ್ಧವಿಮಾನದ ಲ್ಯಾಂಡಿಂಗ್ ನೌಕಾಪಡೆಗಾಗಿ ಅವಳಿ ಇಂಜಿನ್‌ಗಳ ಡೆಕ್ ಆಧಾರಿತ ಯುದ್ಧವಿಮಾನದ ಅಭಿವೃದ್ಧಿ ಯೋಜನೆಯ ಭಾಗವಾಗಿದೆ.

ಇಂದು ಇಳಿದ ಯುದ್ಧವಿಮಾನವು ಒಂಟಿ ಇಂಜಿನ್ ಹೊಂದಿದ್ದು, ಅಭಿವೃದ್ಧಿಗೊಳ್ಳುತ್ತಿರುವ ಅವಳಿ ಇಂಜಿನ್‌ಗಳ ಯುದ್ಧವಿಮಾನವು ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.ನೌಕಾಪಡೆಯ ಪೈಲಟ್‌ಗಳು ಐಎನ್‌ಎಸ್ ವಿಕ್ರಾಂತ್‌ನ ಮೇಲೆ ಯಶಸ್ವಿಯಾಗಿ ಎಲ್‌ಸಿಎ ಅನ್ನು ಇಳಿಸಿರುವುದು ಆತ್ಮ ನಿರ್ಭರ ಭಾರತದತ್ತ ಭಾರತೀಯ ನೌಕಾಪಡೆಯ ಐತಿಹಾಸಿಕ ಸಾಧನೆಯಾಗಿದೆ ಎಂದು ನೌಕಾಪಡೆಯ ವಕ್ತಾರ ಕಮೊಡೋರ್ ವಿವೇಕ ಮಾಧ್ವಾಲ್ ಅವರು ಹೇಳಿಕೆಯಲ್ಲಿ ತಿಳಿಸಿದರು.

ಯುದ್ಧವಿಮಾನವನ್ನು ಹಡಗಿನ ಡೆಕ್‌ನ ಮೇಲೆ ಇಳಿಸುವುದು ಸಂಕೀರ್ಣ ಕಾರ್ಯವಿಧಾನವಾಗಿದೆ. ವಿಮಾನವು ಇಳಿಯುವ ಸ್ಥಳವು ಸುಮಾರು 200 ಮೀ.ಗಳಷ್ಟಿರುತ್ತದೆ ಮತ್ತು ಅಲ್ಲಿ ಲ್ಯಾಂಡ್ ಆಗುವ ಯುದ್ಧವಿಮಾನವನ್ನು ಮೂರು ‘ಅರೆಸ್ಟರ್ ವೈರ್’ಗಳನ್ನು ಬಳಸಿ ನಿಯಂತ್ರಿಸಬೇಕಾಗುತ್ತದೆ. ನೌಕಾಪಡೆಯ ಪರಿಭಾಷೆಯಲ್ಲಿ ಇದನ್ನು ‘ಅರೆಸ್ಟೆಡ್ ಲ್ಯಾಂಡಿಂಗ್’ ಎನ್ನಲಾಗುತ್ತದೆ. ಲ್ಯಾಂಡಿಂಗ್ ಗೇರ್ ಕೂಡ ಭಾರತೀಯ ವಾಯುಪಡೆಯ ವಿಮಾನಗಳಿಗಿಂತ ಭಿನ್ನವಾಗಿರುತ್ತದೆ.

Similar News