ಜಾತ್ಯತೀತ ದೇಶದಲ್ಲಿ ಧರ್ಮಾಧರಿತ ದ್ವೇಷಾಪರಾಧಕ್ಕೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್

Update: 2023-02-06 17:13 GMT

ಹೊಸದಿಲ್ಲಿ, ಫೆ. 6: ದ್ವೇಷ ಭಾಷಣವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್(Supreme Court), ಜಾತ್ಯತೀತ ದೇಶದಲ್ಲಿ ಧರ್ಮಾಧರಿತ ದ್ವೇಷಾಪರಾಧಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ. ಉತ್ತರಪ್ರದೇಶದ ನೋಯ್ಡೆದಲ್ಲಿ ಮಾಡಿದ ದ್ವೇಷ ಭಾಷಣದ ಕುರಿತ ಪ್ರಕರಣದ ವಿಚಾರಣೆ ನಡೆಸುವ ಸಂದರ್ಭ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ‘‘ದ್ವೇಷ ಭಾಷಣವನ್ನು ಬೇರು ಸಮೇತ ಕಿತ್ತೆಸೆಯಬೇಕು. ರಾಜ್ಯ ಸರಕಾರಕ್ಕೆ ಇಚ್ಛಾಸಕ್ತಿ ಇದ್ದರೆ ಅದು ಕೊನೆಗೊಳ್ಳಬಹುದು. ಇದನ್ನು ಮಾಡುವುದು ರಾಜ್ಯ ಸರಕಾರದ ಪ್ರಾಥಮಿಕ ಕರ್ತವ್ಯ’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಕೆ.ಎಂ. ಜೋಸೆಪ್ ನೇತೃತ್ವದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. 2021 ಜುಲೈಯಲ್ಲಿ ದ್ವೇಷಾಪರಾಧದ ಸಂತ್ರಸ್ತರಾದ 62ರ ಹರೆಯದ ಕಝೀಮ್ ಅಹ್ಮದ್ ಶೆರ್ವಾನಿ ಅವರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ತನಗೆ ಹಿಂಸೆ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಅವರು ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದರು. ಪಿತೂರಿಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೂಡ ಅವರು ಮನವಿ ಮಾಡಿದ್ದರು. ‘‘ನೀವು ಸಮಸ್ಯೆಯನ್ನು ಗುರುತಿಸಿದಾಗ ಮಾತ್ರ ಪರಿಹಾರ ಸಿಗಬಹುದು.

ದ್ವೇಷ ಭಾಷಣದ ಕುರಿತು ಒಮ್ಮತದ ಅಭಿಪ್ರಾಯ ಬೆಳೆಯುತ್ತಿದೆ’’ ಎಂದು ನ್ಯಾಯಾಲಯ ಹೇಳಿತು. ದ್ವೇಷಾಪರಾಧಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತಿದೆಯೇ ಅಥವಾ ಕಾರ್ಪೆಟ್ ಅಡಿಯಲ್ಲಿ ಗುಡಿಸಿ ಹಾಕಲಾಗುತ್ತಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಅಲ್ಪಸಂಖ್ಯಾತರು ಅಥವಾ ಬಹುಸಂಖ್ಯಾತರು ಎಂಬ ಸ್ಥಾನಮಾನ ಲೆಕ್ಕಿಸದೆ ಮಾನವರಲ್ಲಿ ಕೆಲವು ನಿರ್ದಿಷ್ಟ ಹಕ್ಕುಗಳು ಅಂತರ್ಗತವಾಗಿವೆ. ನಾವು ಕುಟುಂಬದಲ್ಲಿ ಜನಿಸುತ್ತೇವೆ ಹಾಗೂ ಬೆಳೆಯುತ್ತೇವೆ. ಆದರೆ, ರಾಷ್ಟ್ರವಾಗಿ ನಾವೆಲ್ಲ ಒಂದು. ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Similar News