ಶಿಕ್ಷಣ ಸಂಸ್ಥೆಗಳಲ್ಲಿ ಋತುಚಕ್ರದ ರಜೆ ಅನುಷ್ಠಾನಕ್ಕೆ ತರುವ ಪ್ರಸ್ತಾವ ಇಲ್ಲ: ಕೇಂದ್ರ ಸರಕಾರ
Update: 2023-02-06 23:25 IST
ಹೊಸದಿಲ್ಲಿ, ಫೆ. 6: ಶಿಕ್ಷಣ ಸಂಸ್ಥೆಗಳಲ್ಲಿ ಋತುಚಕ್ರದ ರಜೆ ಅನುಷ್ಠಾನಗೊಳಿಸಲು ಶಾಸನ ತರುವ ಯಾವುದೇ ಪ್ರಸ್ತಾವ ಇಲ್ಲ ಎಂದು ಶಿಕ್ಷಣ ಸಚಿವಾಲಯ ಸೋಮವಾರ ತಿಳಿಸಿದೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರದ ಸಹಾಯಕ ಶಿಕ್ಷಣ ಸಚಿವ ಸುಭಾಸ್ ಸರ್ಕಾರ್(Subhas Sarkar) ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಋತುಚಕ್ರದ ರಜೆ ಅನುಷ್ಠಾನಗೊಳಿಸಲು ಸರಕಾರ ಶಾಸನ ತರಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘‘ಸಚಿವಾಲಯದಲ್ಲಿ ಅಂತಹ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲ’’ ಎಂದರು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ಪರಿಸರ, ಸೌಕರ್ಯ ಕಲ್ಪಿಸಲು ಮೂಲಭೂತ ಮಾರ್ಗಸೂಚಿ ಹಾಗೂ ಮಹಿಳಾ ಸೆಲ್ (ಅರಿವು ಮೂಡಿಸುವುದು, ನೀತಿ ಅನುಷ್ಠಾನ, ಮೇಲ್ವಿಚಾರಣೆ ಹಾಗೂ ಸಮಸ್ಯೆ ಪರಿಹಾರ) ಅನ್ನು ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗ ಪರಿಚಯಿಸಿದೆ ಎಂದರು.