ವಿಷಾಹಾರ ಸೇವನೆ ಪ್ರಕರಣ: ಸಿಟಿ ಆಸ್ಪತ್ರೆ ಮತ್ತು ಹಾಸ್ಟೆಲ್‌ನ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲು

ಅಸ್ವಸ್ಥಗೊಂಡ 231 ವಿದ್ಯಾರ್ಥಿನಿಯರ ಪೈಕಿ 193 ಬಿಡುಗಡೆ

Update: 2023-02-07 14:57 GMT

ಮಂಗಳೂರು: ನಗರ ಹೊರವಲಯದ ಶಕ್ತಿನಗರ ಸಿಟಿ ನರ್ಸಿಂಗ್ ಕಾಲೇಜ್ ಹಾಸ್ಟೆಲ್‌ನಲ್ಲಿ ಸೋಮವಾರ ನಡೆದ ವಿಷಾಹಾರ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಆಸ್ಪತ್ರೆ ಮತ್ತು ಹಾಸ್ಟೆಲ್‌ನ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಈ ಮಧ್ಯೆ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ 231 ವಿದ್ಯಾರ್ಥಿನಿಯರ ಪೈಕಿ 193 ಮಂದಿ ಗುಣಮುಖರಾಗಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 38 ಮಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲು: ‘ಹಾಸ್ಟೆಲ್‌ನಲ್ಲಿ ಯಾವುದೋ ಸಂಶಯಾಸ್ಪದ ವಿಷಪೂರಿತ ಆಹಾರ ನೀಡಿದ್ದರಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಸಿಟಿ ಆಸ್ಪತ್ರೆ ಮತ್ತು ಹಾಸ್ಟೆಲ್‌ನ ಆಡಳಿತ ಮಂಡಳಿಯವರ ಲೋಪದಿಂದ ಘಟನೆ ಸಂಭವಿಸಿರುವುದರಿಂದ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಮವಾರ ಒಟ್ಟು 231 ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದರು. ಇದರಲ್ಲಿ ಹಲವರಿಗೆ ವಾಂತಿ ಬೇಧಿ, ಸಣ್ಣ ಪ್ರಮಾಣದ ನಿರ್ಜಲೀಕರಣ (ಮೈಲ್ಡ್ ಡಿಹೈಡ್ರೇಷನ್) ಕಂಡುಬಂದಿತ್ತು. 115 ಮಂದಿ ಹೊರರೋಗಿಗಳಾಗಿ ಮತ್ತು 116 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಮಂಗಳವಾರ ಬೆಳಗ್ಗೆ 13 ಮಂದಿ ವಿದ್ಯಾರ್ಥಿನಿಯರಲ್ಲಿ ಹೊಟ್ಟೆನೋವು ಮತ್ತು ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆಯ ವೇಳೆಗೆ 38 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಎಲ್ಲ ವಿದ್ಯಾರ್ಥಿಗಳು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ತಿಳಿಸಿದ್ದಾರೆ.

ಪ್ರಯೋಗಾಲಯಕ್ಕೆ ರವಾನೆ: ರಕ್ತದ ಮಾದರಿ, ಉಪಯೋಗಿಸಿದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವಿಷಪೂರಿತ ಆಹಾರ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿರಬಹುದು. ಆದಾಗ್ಯೂ ಅಸ್ವಸ್ಥತೆಗೆ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ಪ್ರಯೋಗಾಲಯದ ವರದಿಯನ್ನು ನಿರೀಕ್ಷಿಸಲಾಗುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ತಿಳಿಸಿದ್ದಾರೆ.

ವಿಶೇಷ ವೈದ್ಯಕೀಯ ತಂಡ: ಹಾಸ್ಟೆಲ್‌ನಲ್ಲಿ ನಿರಂತರ ಸೇವೆಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವಿಶೇಷ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ. ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮಂಗಳವಾರ ಮತ್ತೊಮ್ಮೆ ಹಾಸ್ಟೆಲ್‌ಗೆ ಭೇಟಿ ನೀಡಿ ಫ್ರಿಡ್ಜ್‌ನಲ್ಲಿಟ್ಟ ಮಾಂಸ ಮತ್ತಿತರ ಆಹಾರ ವಸ್ತುಗಳನ್ನು ಪರಿಶೀಲಿಸಿ ಮಾದರಿ ಸಂಗ್ರಹಿಸಲಾಗಿದೆ. ಸದ್ಯ ಹಾಸ್ಟೆಲ್‌ನ ಅಡುಗೆಮನೆಯಲ್ಲಿ ಯಾವುದೇ ಆಹಾರ ತಯಾರಿಸದಂತೆ ಆದೇಶಿಸಲಾಗಿದೆ. ಶುದ್ಧ ಆಹಾರ ಮತ್ತು ನೀರು ಪೂರೈಸುವಂತೆ ಸೂಚಿಸಲಾಗಿದೆ. ಅಲ್ಲದೆ ಯಾವುದೇ ವಿದ್ಯಾರ್ಥಿ ಗಳು ತಮ್ಮ ಸ್ವಂತ ಊರಿಗೆ ತೆರಳದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಆಡಳಿತ ಮಂಡಳಿಗೆ ಜಿಲ್ಲಾಡಳಿತ ನಿರ್ದೇಶಿಸಿದೆ.

ಸರಕಾರಕ್ಕೆ ವರದಿ: ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಮತ್ತು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ದ.ಕ.ಜಿಪಂ ಸಿಇಒ ಅವರಿಗೆ ಮಂಗಳವಾರ ತನಿಖಾ ವರದಿ ನೀಡಿದ್ದಾರೆ. ಈ ವರದಿಯನ್ನು ಆಧರಿಸಿದ ಜಿಪಂ ಸಿಇಒ ಅವರು ರಾಜ್ಯ ಸರಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದಾರೆ.

Similar News