ಸಾಂವಿಧಾನಿಕ ಸಂಸ್ಥೆಗಳು ಕಾನೂನಿಗಿಂತ ದೊಡ್ಡವಲ್ಲ: ಸುಪ್ರೀಂಕೋರ್ಟ್

Update: 2023-02-07 09:41 GMT

ಹೊಸದಿಲ್ಲಿ: ಸಾಂವಿಧಾನಿಕ ಸಂಸ್ಥೆಗಳು ತಾವು ಕಾನೂನಿಗಿಂತ ದೊಡ್ಡವು ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವವರು ಸಲ್ಲಿಸಿರುವ ಕ್ಷಮಾದಾನದ ಅರ್ಜಿಗಳ ಕುರಿತು ಮೂರು ತಿಂಗಳೊಳಗೆ ನಿರ್ಣಯ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಗಡುವು ವಿಧಿಸಬಾರದು ಎಂಬ ಉತ್ತರ ಪ್ರದೇಶ ಸರ್ಕಾರದ ಮನವಿಯನ್ನು ತಳ್ಳಿ ಹಾಕಿದೆ ಎಂದು hindustantimes.com ವರದಿ ಮಾಡಿದೆ.

ಜೀವಾವಧಿ ಶಿಕ್ಷೆಗೊಳಗಾಗಿರುವ 2,248 ಪ್ರಕರಣಗಳ ಕುರಿತು ಮೂರು ತಿಂಗಳೊಳಗೆ ನಿರ್ಣಯ ಕೈಗೊಳ್ಖಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಕಾನೂನು ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತದೆ ಮತ್ತು ಸಾಂವಿಧಾನಿಕ ಸಂಸ್ಥೆಗಳಲ್ಲೂ ನಿರ್ವಾತವಿರಬಾರದು ಎಂದು ಸಂವಿಧಾನ ಸ್ಪಷ್ಟಪಡಿಸಿದೆ ಎಂದು ಹೇಳಿದೆ.

"ಸಾಂವಿಧಾನಿಕ ಸಂಸ್ಥೆಗಳಲ್ಲೂ ನಿರ್ವಾತವಿರಬಾರದು. ಪ್ರತಿ ಹಂತದಲ್ಲಿನ ನಿರ್ಣಯವನ್ನೂ ಮತ್ತೊಂದು ಸಂಸ್ಥೆ ಪರಿಶೀಲಿಸುತ್ತದೆ. ನಮ್ಮ ಸಂವಿಧಾನ ಅಷ್ಟು ಮಹತ್ವದ್ದಾಗಿದೆ‌. ಯಾವುದೇ ವ್ಯಕ್ತಿ ತಾನು ಸಾಂವಿಧಾನಿಕ ಸಂಸ್ಥೆ ಎಂದ ಮಾತ್ರಕ್ಕೇ ಕಾನೂನನ್ನು ಮೀರಲು ಸಾಧ್ಯವಿಲ್ಲ" ಎಂದು ನ್ಯಾ. ಪಿ.ಎಸ್.ನರಸಿಂಹ ಮತ್ತು ನ್ಯಾ. ಜೆ.ಬಿ.ಪರ್ದಿವಾಲಾ ಅವರನ್ನೂ ಒಳಗೊಂಡಿದ್ದ ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ.

ರಾಜ್ಯದ ಸಂದರ್ಭೋಚಿತ ನೀತಿಗಳನ್ವಯ ಕ್ಷಮಾದಾನಕ್ಕೆ ಅರ್ಹವಾಗಿರುವ ಕೈದಿಗಳನ್ನು ಅವಧಿಗೂ ಮುಂಚಿತವಾಗಿ ಬಿಡುಗಡೆ ಮಾಡಲು ಮೂರು ತಿಂಗಳೊಳಗಾಗಿ ನಿರ್ಣಯ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದ ಸುಪ್ರೀಂಕೋರ್ಟ್, ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿತು.

Similar News