​ಮಮತಾ ಬ್ಯಾನರ್ಜಿ ಗುಣಗಾನ ಮಾಡಿದ ಬಂಗಾಳ ರಾಜ್ಯಪಾಲರು!

Update: 2023-02-07 10:21 GMT

ಕೊಲ್ಕತ್ತಾ: ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಇರುವ ಪರಿಸ್ಥಿತಿಗಿಂತ ಭಿನ್ನವಾಗಿ ಬಂಗಾಳದಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಡುವಿನ ಸಂಬಂಧ ಸದ್ಯಕ್ಕೆ ಸೌಹಾರ್ದಯುತವಾಗಿ ಇರುವುದು ಅಚ್ಚರಿಗೆ ಕಾರಣವಾಗಿದೆ.

ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಸೋಮವಾರ ಸಂತ ಕ್ಸೇವಿಯರ್ ವಿವಿ ಕುಲಪತಿ ಫಾದರ್ ಫೆಲಿಕ್ಸ್ ರಾಜ್ ಅವರಿಂದ ಮಮತಾ ಬ್ಯಾನರ್ಜಿ ಡಿ-ಲಿಟ್ ಪದವಿ ಸ್ವಿಕರಿಸುವ ಸಮಾರಂಭದಲ್ಲಿ ರಾಜಕೀಯ ಚಾಣಾಕ್ಷತನಕ್ಕಾಗಿ ಮತ್ತು ಸಾಹಿತ್ಯಿಕ ಅನ್ವೇಷಣೆಗಳಿಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. 

"ಇದು ಅವರ ರಾಜಕೀಯ ಚಾಣಾಕ್ಷತೆಗೆ ಸಂದ ಗೌರವ ಅಲ್ಲ; ಅವರು ಇಂಥ ಹಲವು ಪ್ರಶಸ್ತಿಗಳನ್ನು ರಾಜಕೀಯ ಚಾಣಾಕ್ಷತನಕ್ಕಾಗಿ ಈ ಹಿಂದೆಯೂ ಜನರ ವಿಶ್ವವಿದ್ಯಾನಿಲಯಗಳಿಂದ ಪಡೆದಿದ್ದಾರೆ" ಎಂದು ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿಯವರ ನಿರಂತರ ಯಶಸ್ಸನ್ನು ಉಲ್ಲೇಖಿಸಿ ನುಡಿದರು. "ಇದು ಅವರು ಸಾಹಿತ್ಯ ಕ್ಷೇತ್ರದಲ್ಲಿ, ಚಿತ್ರಕಲೆ ಮತ್ತು ಪದ್ಯಸಾಹಿತ್ಯದಲ್ಲಿ ಸಾಧಿಸಿದ ಶ್ರೇಷ್ಠತೆಗೆ ಸಂದ ಗೌರವ" ಎಂದು ಬಣ್ಣಿಸಿದರು.

ಇಂಥ ಸೌಹಾರ್ದ ಸಂಬಂಧ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯದಲ್ಲಿ ಅಪರೂಪ. ಅದರಲ್ಲೂ ಬಂಗಾಳದಲ್ಲಂತೂ ಅತ್ಯಪರೂಪ. ಜಗ್‍ದೀಪ್ ಧನ್ಕರ್ ಅವರು ರಾಜಭವನದಲ್ಲಿದ್ದ ಅವಧಿಯಲ್ಲಿ ಇದನ್ನು ಊಹಿಸಲೂ ಸಾಧ್ಯವಿರಲಿಲ್ಲ. ರಾಜ್ಯ ಸರ್ಕಾರವನ್ನು ನಿರಂತರವಾಗಿ ಟೀಕಿಸುತ್ತಾ ಬಂದ ಅಂದಿನ ರಾಜ್ಯಪಾಲ ಧನ್ಕರ್ ಅವರನ್ನು ಬಿಜೆಪಿ ಏಜೆಂಟ್ ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿತ್ತು.

"ಸಾಹಿತ್ಯ ಮತ್ತು ಬರವಣಿಗೆಯ ದಾರಿಯಲ್ಲಿ ಮುನ್ನಡೆದ ಪ್ರಸಿದ್ಧ ಮುತ್ಸದ್ಧಿ ಮತ್ತು ರಾಜಕೀಯ ನಾಯಕರ ವಿಶಿಷ್ಟ ಗುಂಪಿಗೆ ಅವರು ಸಹಜವಾಗಿಯೇ ಏರಿದ್ದಾರೆ. ಈ ಸಂದರ್ಭದಲ್ಲಿ ನಾವು ಸಾಹಿತಿ, ಲೇಖಕ, ಕವಿ ಮತ್ತು ಕಾದಂಬರಿಕಾರರಾದ ಜೆಕ್ ಗಣರಾಜ್ಯದ ಅಧ್ಯಕ್ಷ ಹವೆಲ್ ಅವರನ್ನು ನೆನಪಿಸಿಕೊಳ್ಳಬೇಕು. ಭಾರತದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಎಪಿಜೆ ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ ಅವರಂಥ ಮುತ್ಸದ್ಧಿಗಳ ತಂಡದಲ್ಲಿ ಮಮತಾ ಬ್ಯಾನರ್ಜಿ ಕೂಡಾ ವಿಶೇಷ ಸದಸ್ಯೆ. ಈ ಎಲ್ರೂ ರಾಜಕೀಯ ಮುತ್ಸದ್ಧಿಗಳು ಹಾಗೂ ಲೇಖಕರು. ವಿನ್‍ಸ್ಟನ್ ಚರ್ಚಿಲ್ ಹಾಗೂ ಜಾನ್ ಮಿಲ್ಟನ್ ಅವರೂ ಈ ವರ್ಗಕ್ಕೆ ಸೇರಿದವರು" ಎಂದು ಆನಂದ್ ಬಣ್ಣಿಸಿದರು.

ಇದನ್ನೂ ಓದಿ: ಸಾಂವಿಧಾನಿಕ ಸಂಸ್ಥೆಗಳು ಕಾನೂನಿಗಿಂತ ದೊಡ್ಡವಲ್ಲ: ಸುಪ್ರೀಂಕೋರ್ಟ್

Similar News