ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಪಾರ್ಶ್ವವಾಯು ಪೀಡಿತ ತಂದೆಯನ್ನೇ ಕೊಂದ ಯುವಕ

Update: 2023-02-07 12:38 GMT

ಹೊಸದಿಲ್ಲಿ: ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಪಾರ್ಶ್ವವಾಯು ಪೀಡಿತ ತಂದೆಯ ಕತ್ತು ಹಿಸುಕಿ ಕೊಂದ ಆರೋಪದಲ್ಲಿ 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇಂದ್ರ ದೆಹಲಿಯ ಆನಂದ್ ಪರ್ಬತ್‌ನಿಂದ ವರದಿಯಾಗಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ಜಿತೇಂದ್ರ ಶರ್ಮ (45) ಎಂದು ಗುರುತಿಸಲಾಗಿದ್ದು, ಅವರ ಪುತ್ರ ಆರೋಪಿ ಸುಮಿತ್ ಸದ್ಯ ನಿರುದ್ಯೋಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ದೆಹಲಿಯ ಉಪ ಪೊಲೀಸ್ ಆಯುಕ್ತೆ ಶ್ವೇತಾ ಚೌಹಾಣ್, ಈ ಘಟನೆ ಫೆಬ್ರವರಿ 3ರಂದು ನಡೆದಿದೆ. ಅಂದು ರಾತ್ರಿ ಒಂಬತ್ತು ಗಂಟೆಗೆ ಜಿತೇಂದ್ರ ಶರ್ಮರ ಪತ್ನಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ತಮ್ಮ ಪತಿಯ ಹತ್ಯೆಯಾಗಿರುವ ಕುರಿತು ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಆನಂದ್ ಪರ್ಬತ್ ಠಾಣೆಯ ಪೊಲೀಸರ ತಂಡಕ್ಕೆ ಜಿತೇಂದ್ರ ಶರ್ಮ ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಕಂಡು ಬಂದರು ಎಂದು ತಿಳಿಸಿದ್ದಾರೆ.

"ಆರಂಭದಲ್ಲಿ, ಮೃತ ವ್ಯಕ್ತಿಯು ಪಾರ್ಶ್ವವಾಯು ಪೀಡಿತ ಮತ್ತು ಮದ್ಯವ್ಯಸನಿಯೂ ಆಗಿದ್ದುದರಿಂದ ಸಹಜ ಸಾವಿನಂತೆ ಕಂಡು ಬಂದಿತ್ತು. ಆದರೆ, ಸಂತ್ರಸ್ತನ ಪತ್ನಿಯು ತನ್ನ ಪತಿಯನ್ನು ತನ್ನ ಮಗ ಕೊಂದಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿದಾಗ ಹತ್ಯೆ ಸಾಧ್ಯತೆಯತ್ತ ಗಮನ ಹರಿಸಿದೆವು" ಎಂದು ಅವರು ಹೇಳಿದ್ದಾರೆ.

ನಂತರ ಜಿತೇಂದ್ರ ಶರ್ಮರ ಮೃತದೇಹವನ್ನು ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ವರ್ಗಾಯಿಸಿ, ಫೆಬ್ರವರಿ 4ರಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಗ ವೈದ್ಯರು ಇದು ಸಹಜ ಸಾವಲ್ಲ; ಹತ್ಯೆ ಎಂದು ಮಾಹಿತಿ ನೀಡಿದರು. ಈ ಕುರಿತು ಆನಂದ್ ಪರ್ಬತ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 302 (ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ತನಿಖೆಯ ಸಂದರ್ಭದಲ್ಲಿ ಪೊಲೀಸರು ಹಲವಾರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಎಂದು ಶ್ವೇತಾ ಚೌಹಾಣ್ ತಿಳಿಸಿದ್ದಾರೆ.

"ಇದರೊಂದಿಗೆ ನೆರೆಮನೆ ವ್ಯಕ್ತಿಯ ಹೇಳಿಕೆಯನ್ನೂ ಪಡೆಯಲಾಯಿತು. "ನಾನು ಸಂತ್ರಸ್ತ ವ್ಯಕ್ತಿ ಹಾಗೂ ಆತನ ಪುತ್ರನೊಂದಿಗೆ ಸಂಜೆ 6.30ರವರೆಗೆ ಮದ್ಯಪಾನ ಮಾಡಿ, ನಂತರ ಮನೆಯಿಂದ ಹೊರ ಬಂದಿದ್ದೆ" ಎಂದು ತಿಳಿಸಿದರು. ಸುಮಿತ್‌ನನ್ನು ಸಾಕ್ಷಿಯೊಂದಿಗೆ ಮುಖಾಮುಖಿಯಾಗಿಸಿ ವಿಚಾರಣೆಗೊಳಪಡಿಸಿದಾಗ, ಆತ ತನ್ನ ಅಪರಾಧವನ್ನು ಒಪ್ಪಿಕೊಂಡ" ಎಂದು ಪೊಲೀಸರು ಹೇಳಿದ್ದಾರೆ.

"ಘಟನೆಯ ದಿನ ಮೃತ ಜಿತೇಂದ್ರ ಶರ್ಮ ಹಾಗೂ ಆತನ ಪುತ್ರ ಸುಮಿತ್ ಇಬ್ಬರೂ ಬೆಳಗ್ಗೆಯಿಂದ 11ಸುತ್ತು ಮದ್ಯ ಸೇವನೆ ಮಾಡಿದ್ದರು. ಸಂಜೆ ಜಿತೇಂದ್ರ ಶರ್ಮ ಹಾಸಿಗೆಯ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದರಿಂದ ಆಕ್ರೋಶಗೊಂಡ ಸುಮಿತ್, ತನ್ನ ತಂದೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ" ಎಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಾಂವಿಧಾನಿಕ ಸಂಸ್ಥೆಗಳು ಕಾನೂನಿಗಿಂತ ದೊಡ್ಡವಲ್ಲ: ಸುಪ್ರೀಂಕೋರ್ಟ್

Similar News