ನಕಲಿ ಗುಂಡಿನ ಕಾಳಗದಲ್ಲಿ ವ್ಯಕ್ತಿಯ ಹತ್ಯೆಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಹೊಣೆ: ಅಸ್ಸಾಂ ಮಾನವಹಕ್ಕು ಆಯೋಗ

Update: 2023-02-07 11:41 GMT

ಗುವಾಹಟಿ: ಅಸ್ಸಾಂ ಮಾನವ ಹಕ್ಕುಗಳ ಆಯೋಗ (ಎಎಚ್ಆರ್ಸಿ)ವು 2021ರಲ್ಲಿ ನಕಲಿ ಗುಂಡಿನ ಕಾಳಗದಲ್ಲಿ ಕಳ್ಳತನ ಆರೋಪಿಯ ಹತ್ಯೆ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ತಪ್ಪಿತಸ್ಥರನ್ನಾಗಿ ಘೋಷಿಸಿದೆ.

ಹತ್ಯೆಯಾದ ಮುಹಮ್ಮದ್ ಅಷಾ ಬಾಬುವಿನ ಪತ್ನಿ ಮೋನುವಾರಾ ಬೇಗಮ್ ಗೆ ಏಳು ಲಕ್ಷ ರೂ.ಗಳ ಪರಿಹಾರವನ್ನು ಎರಡು ತಿಂಗಳೊಳಗೆ ಪಾವತಿಸುವಂತೆ ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳಾದ ಖರುಪೇಟಿಯಾ ಪೊಲೀಸ್ ಠಾಣೆಯ ಅಭಿಜಿತ ಕಾಕೋಟಿ ಮತ್ತು ಅಚ್ಯುತ ದತ್ತ ಅವರನ್ನು ಶಿಕ್ಷಿಸುವಂತೆ ಆಯೋಗವು ಅಸ್ಸಾಂ ಸರಕಾರಕ್ಕೆ ಆದೇಶಿಸಿದೆ.

ಅಷಾ ಬಾಬು 2021, ಆ.11ರಂದು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಒಂದು ದಿನ ಮೊದಲಷ್ಟೇ ಕಳ್ಳತನದ ಆರೋಪದಲ್ಲಿ ಪೊಲೀಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಬಾಬು ಅವರನ್ನು ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲು ಧನಸಿರಿ ನದಿ ದಂಡೆಗೆ ಕರೆದೊಯ್ಯಲಾಗಿತ್ತು. ಶೋಧದ ವೇಳೆ ಬಾಬು ಪರಾರಿಯಾಗಲು ಯತ್ನಿಸಿದ್ದರು ಮತ್ತು ಪೊಲೀಸರತ್ತ ಗುಂಡು ಹಾರಿಸಿದ್ದರು. ಪೊಲೀಸರು ಆತ್ಮರಕ್ಷಣೆಗಾಗಿ ತಿರುಗಿ ಗುಂಡು ಹಾರಿಸಿದಾಗ ಬಾಬು ಮೃತಪಟ್ಟಿದ್ದರು ಎಂದು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ತಿಳಿಸಿರುವುದನ್ನು ಆಯೋಗವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ತನ್ನ ಪತಿಯ ಹತ್ಯೆಯ ಬಗ್ಗೆ ಬೇಗಮ್ ಎಎಚ್ಆರ್ಸಿಗೆ ದೂರು ಸಲ್ಲಿಸಿದ್ದರು. ಬಂಧನದ ಸಮಯದಲ್ಲಿ ತನ್ನ ಪತಿ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಅವರನ್ನು ಬಲವಂತದಿಂದ ಠಾಣೆಗೆ ಕರೆದೊಯ್ದಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ತನ್ನ ಪತಿಯನ್ನು ಪೊಲೀಸರು ಚಿತ್ರಹಿಂಸೆ ನೀಡಿ ಕೊಂದಿದ್ದಾರೆ ಎಂದು ಅವರು ಆರೋಪಿಸಿದ್ದರು.

ಎನ್ಕೌಂಟರ್ ಸ್ಥಳದಲ್ಲಿ ಬಾಬುವಿನ ಶವದ ಬಳಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದರು ಎನ್ನಲಾದ ಪಿಸ್ತೂಲಿನ ಮೇಲೆ ಬಾಬುವಿನ ಬೆರಳಚ್ಚುಗಳು ಇದ್ದಿರಲಿಲ್ಲ ಎನ್ನುವುದು ಆಯೋಗದ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಬಾಬು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆರೋಪ ಪೊಲೀಸ್ ಅಧಿಕಾರಿಗಳು ಅವರನ್ನು ನಕಲಿ ಎನ್ಕೌಂಟರ್ನಲ್ಲಿ ಕೊಂದಿರುವುದು ಸಾಬೀತಾಗಿದೆ ಎಂದು ಆಯೋಗವು ತನ್ನ ತೀರ್ಪಿನಲ್ಲಿ ಹೇಳಿದೆ.

Similar News