ಮೋದಿ, ಅಮಿತ್ ಶಾರಿಂದ ಕರ್ನಾಟಕದಲ್ಲಿ ರಾಜಕೀಯ ಪ್ರವಾಸೋದ್ಯಮ: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

Update: 2023-02-07 16:50 GMT

ಉಡುಪಿ: ಕೊರೋನ ಸಂದರ್ಭದಲ್ಲಿ ರಾಜ್ಯದಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಾಗ ಮತ್ತು ನೆರೆಯಿಂದ ಆಸ್ತಿಪಾಸ್ತಿ ನಷ್ಟ ಅನುಭವಿಸಿದಾಗ ರಾಜ್ಯಕ್ಕೆ ಭೇಟಿ ನೀಡಿ ವಿಚಾರಿಸದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇತ್ತೀಚೆಗೆ ಕರ್ನಾಟಕದಲ್ಲಿ ಪದೇಪದೇ ಪ್ರವಾಸ ಮಾಡುತ್ತಿರುವುದು ಹಾಸ್ಯಾಸ್ಪದ. ಈ ಮೂಲಕ ಇವರು ಕರ್ನಾಟಕದಲ್ಲಿ ರಾಜಕೀಯ ಪ್ರವಾಸೋದ್ಯಮ ಕಾರ್ಯಕ್ರಮ ಹಮ್ಮಿಕೊಂಡಿರುವಂತೆ ಕಾಣುತ್ತದೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರಾದ್ಯಂತ  ಮಂಗಳವಾರ ಹಮ್ಮಿಕೊಳ್ಳಲಾದ ಕರಾವಳಿ ಪ್ರಜಾಧ್ವನಿ ಯಾತ್ರೆಯ ಪ್ರಯುಕ್ತ ಆತ್ರಾಡಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ದೇಶದ ಎಲ್ಲ ಪ್ರಧಾನ ಮಂತ್ರಿಗಳು ಸೇರಿ ಈವರೆಗೆ 54ಲಕ್ಷ ಕೋಟಿ ಸಾಲ ಮಾಡಿದರೆ, ನರೇಂದ್ರ ಮೋದಿ ಅದನ್ನು 156 ಲಕ್ಷ ಕೋಟಿ ರೂ.ಗೆ ಏರಿಸಿದ್ದಾರೆ.  ಕರ್ನಾಟಕ ರಾಜ್ಯದಲ್ಲಿ 6.7ಲಕ್ಷ ಕೋಟಿ ರೂ. ಜಿಎಸ್‌ಟಿ ಪಾವತಿ ಮಾಡುತ್ತಿದ್ದೇವೆ. ಅದರಂತೆ ನಮಗೆ ಬರಬೇಕಾದ 3.5 ಲಕ್ಷ ಕೋಟಿ ರೂ.ನಲ್ಲಿಯೂ ಕಡಿತ ಮಾಡಲಾಗಿದೆ. 14 ಹಣಕಾಸು ಆಯೋಗದ ಪ್ರಕಾರ ನಮಗೆ ಬರಬೇಕಾದ ಜಿಎಸ್‌ಟಿ ಹಣವನ್ನು ಕೇಂದ್ರ ಕೊಡುತ್ತಿಲ್ಲ. 2.3ಲಕ್ಷ ಕೋಟಿ ಪಾವತಿಸುವ ಉತ್ತರ ಪ್ರದೇಶಕ್ಕೆ 6ಲಕ್ಷ ಕೋಟಿ ಕೊಟ್ಟಿದ್ದಾರೆ. ಇವರು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ ಎಂದರು.

ಬಂಡವಾಳಶಾಹಿಗಳಿಗೆ 10ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ.  ಆದರೆ ರೈತರ ಸಾಲ ಮನ್ನಾ ಮಾಡಲು ಇವರು ಹಿಂದೇಟು ಹಾಕುತ್ತಿದ್ದಾರೆ. ಇದು ಕೇವಲ ಶ್ರೀಮಂತರ ಸರಕಾರ. ಇವರ ಹಿಂಬಾಲಕರಿಗೆ ಮಾತ್ರ ಬಂಡವಾಳ ಹೂಡಿಸುತ್ತಿದ್ದಾರೆ. ಸರಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ವೆಚ್ಚ ಮಾಡುತ್ತಿಲ್ಲ. ಅವರ ಖಾಸಗಿ ಸ್ನೇಹಿತರಿಗೆ ಬಂಡವಾಳ ನೀಡುತ್ತಿದ್ದಾರೆ ಎಂದು ಅವರು ದೂರಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಬಿಜೆಪಿಯವರು ದೇಶದ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಆದುದರಿಂದ ನಾವು ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತೆಯನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗೀಯ ಉಸ್ತುವಾರಿ ರೋಝಿ ಜಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್, ಮುಖಂಡರಾದ ಇಸ್ಮಾಯಿಲ್ ಆತ್ರಾಡಿ, ಹರೀಶ್ ಹೆಗ್ಡೆ, ಗೀತಾ ವಾಗ್ಳೆ, ಬಾಬಣ್ಣ ನಾಯಕ್, ನವೀನ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಸುಧೀರ್ ಪಟ್ಲ ಸ್ವಾಗತಿಸಿದರು. ಲಕ್ಷ್ಮೀನಾರಾಯಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Similar News