ಮುಸ್ಲಿಮರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಿ ಅಣಕು ಕಾರ್ಯಾಚರಣೆಗಳನ್ನು ನಡೆಸಬೇಡಿ: ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ

Update: 2023-02-07 16:58 GMT

ಮುಂಬೈ,ಫೆ.7: ಮುಂದಿನ ವಿಚಾರಣಾ ದಿನಾಂಕವಾದ ಫೆ.10ರವರೆಗೆ ಮುಸ್ಲಿಮರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಿ ಅಣಕು ಕಾರ್ಯಾಚರಣೆಗಳನ್ನು ನಡೆಸದಂತೆ ಬಾಂಬೆ ಉಚ್ಚ ನ್ಯಾಯಾಲಯ(HIGH COURT OF BOMBAY)ದ ಔರಂಗಾಬಾದ್ ಪೀಠವು ಮಹಾರಾಷ್ಟ್ರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಸಾಮಾಜಿಕ ಕಾರ್ಯಕರ್ತ ಸೈಯದ್ ಉಸಾಮಾ(Syed Usama) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಮಂಗೇಶ ಪಾಟೀಲ್(Mangesh Patil) ಮತ್ತು ಎಸ್.ಜಿ.ಚಪಲಗಾಂವಕರ್(s. g. chapalgaonkar) ಅವರ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.

ಪೊಲೀಸರು ನಡೆಸುವ ಅಣಕು ಕಾರ್ಯಾಚರಣೆಗಳಲ್ಲಿ ಭಯೋತ್ಪಾದಕ ಪಾತ್ರವನ್ನು ನಿರ್ವಹಿಸುವ ಸಿಬ್ಬಂದಿಗಳು ಮುಸ್ಲಿಮ್ ಪುರುಷರಂತೆ ಪೋಷಾಕುಗಳನ್ನು ತೊಡುತ್ತಾರೆ ಎಂದು ಉಸಾಮಾ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ. ಅಣಕು ಕಾರ್ಯಾಚರಣೆಯ ಭಾಗವಾಗಿ ಅವರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾರೆ ಎಂದೂ ಉಸಾಮಾ ಆರೋಪಿಸಿದ್ದಾರೆ.

ಈ ಅಣಕು ಕಾರ್ಯಾಚರಣೆಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸರಕಾರ ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ‘ಭಯೋತ್ಪಾದಕ ’ಎಂದು ತೋರಿಸುತ್ತಿರುವುದು ಮುಸ್ಲಿಮ್ ಸಮುದಾಯದ ವಿರುದ್ಧ ಅವರ ತಾರತಮ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಭಯೋತ್ಪಾದಕರು ನಿರ್ದಿಷ್ಟ ಧರ್ಮವನ್ನು ಹೊಂದಿದ್ದಾರೆ ಎಂಬ ಸಂದೇಶವನ್ನು ರವಾನಿಸುತ್ತದೆ ಮತ್ತು ಪೊಲೀಸರ ಈ ಕೃತ್ಯವು ಮುಸ್ಲಿಮ್ ಸಮುದಾಯದ ಮಾನಹಾನಿಗೆ ಸಮನಾಗಿದೆ ಎಂದು ಅವರು ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಫೆ.3ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಪೀಠವು,ಅಣಕು ಕಾರ್ಯಾಚರಣೆಗಳನ್ನು ನಡೆಸಲು ಯಾವುದೇ ಮಾರ್ಗಸೂಚಿಯಿದ್ದರೆ ಅದನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ರಾಜ್ಯ ಸರಕಾರವನ್ನು ಆದೇಶಿಸಿತು. ಈ ವಿಷಯದಲ್ಲಿ ಸೂಚನೆಗಳನ್ನು ಪಡೆದುಕೊಳ್ಳುವಂತೆ ಅದು ಪಬ್ಲಿಕ್ ಪ್ರಾಸಿಕ್ಯೂಟರ್‌ಗೂ ನಿರ್ದೇಶ ನೀಡಿತು.

Similar News