ರಾಣಾ ಅಯ್ಯೂಬ್‌ ಪ್ರಕರಣದ ವಿಚಾರಣೆ ಉತ್ತರ ಪ್ರದೇಶದಲ್ಲೇ ಎದುರಿಸಲು ಸುಪ್ರೀಂ ನಿರ್ದೇಶನ

Update: 2023-02-07 17:05 GMT

ಹೊಸದಿಲ್ಲಿ, ಫೆ. 7: ಅನುಷ್ಠಾನ ನಿರ್ದೇಶನಾಲಯ ಹೂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಉತ್ತರಪ್ರದೇಶದ ಘಾಝಿಯಾಬಾದ್ ನ್ಯಾಯಾಲಯದಲ್ಲೇ ಎದುರಿಸುವಂತೆ ಸುಪ್ರೀಂ ಕೋರ್ಟ್(Supreme Court) ಮಂಗಳವಾರ ಪತ್ರಕರ್ತೆ ರಾಣಾ ಅಯ್ಯೂಬ್‌(Rana Ayyub) ಗೆ ನಿರ್ದೇಶನ ನೀಡಿದೆ.

ಘಾಝಿಯಾಬಾದ್ ನ್ಯಾಯಾಲಯವು ತನ್ನ ವಿರುದ್ಧ ನೀಡಿರುವ ಸಮನ್ಸ್‌ಗಳನ್ನು ಪ್ರಶ್ನಿಸಿ ರಾಣಾ ಅಯೂಬ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಜನವರಿ 27ರಂದು ತನ್ನೆದುರು ಹಾಜರಾಗುವಂತೆ ಘಾಝಿಯಾಬಾದ್ ನ್ಯಾಯಾಲಯವು ರಾಣಾ ಅಯೂಬ್‌ಗೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಪತ್ರಕರ್ತೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ, ಅಯೂಬ್ ವಿರುದ್ಧದ ಮೊಕದ್ದಮೆಯ ವಿಚಾರಣೆಯನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್ ಘಾಝಿಯಾಬಾದ್ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು.

ಅನುಷ್ಠಾನ ನಿರ್ದೇಶನಾಲಯವು ಆರೋಪಿಸಿರುವ ಅಪರಾಧವು ಉತ್ತರಪ್ರದೇಶದಲ್ಲಿ ನಡೆಯದಿರುವುದರಿಂದ ಈ ಪ್ರಕರಣದಲ್ಲಿ ಘಾಝಿಯಾಬಾದ್ ನ್ಯಾಯಾಲಯಕ್ಕೆ ಕಾರ್ಯವ್ಯಾಪ್ತಿಯಿಲ್ಲ ಎಂಬುದಾಗಿ ತನ್ನ ಅರ್ಜಿಯಲ್ಲಿ ಅಯೂಬ್ ವಾದಿಸಿದ್ದರು.

ಆದರೆ, ಮಂಗಳವಾರ, ವಿ. ರಾಮಸುಬ್ರಮಣಿಯನ್ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು, ಘಾಝಿಯಾಬಾದ್‌ನಲ್ಲಿ ನಡೆಯುವ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿತು.

‘‘ಅಪರಾಧ ಎಲ್ಲಿ ನಡೆಯಿತು ಎನ್ನುವುದು ಪುರಾವೆಗಳ ಆಧಾರದಲ್ಲಿ ನಿರ್ಧರಿಸಬೇಕಾದ ಪ್ರಶ್ನೆಯಾಗಿದೆ. ಈ ಪ್ರಶ್ನೆಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಎತ್ತುವುದಕ್ಕಾಗಿ ನಾವು ಹಾಗೆಯೇ ಬಿಡುತ್ತೇವೆ’’ ಎಂದು ನ್ಯಾಯಾಲಯ ಹೇಳಿತು.

ಕೆಟ್ಟೊ ಎಂಬ ಆನ್‌ಲೈನ್ ನಿಧಿ ಸಂಗ್ರಹ ವೇದಿಕೆಯ ಮೂಲಕ ಸಮಾಜಸೇವೆಯ ಉದ್ದೇಶಗಳಿಗಾಗಿ ಸಂಗ್ರಹಿಸಲಾದ ಹಣವನ್ನು ಅಯೂಬ್ ಅಕ್ರಮವಾಗಿ ಪಡೆದಿದ್ದಾರೆ ಎಂಬುದಾಗಿ 2021 ಸೆಪ್ಟಂಬರ್‌ನಲ್ಲಿ ಅವರ ವಿರುದ್ಧ ಅನುಷ್ಠಾನ ನಿರ್ದೇಶನಾಲಯವು ಎಫ್‌ಐಆರ್ ದಾಖಲಿಸಿತ್ತು.

Similar News