ಬ್ರಾಹ್ಮಣ ವಿರೋಧಿ ಹೇಳಿಕೆಗಾಗಿ ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ವಿರುದ್ಧ ಬಿಹಾರ ಕೋರ್ಟ್‌ನಲ್ಲಿ ಪ್ರಕರಣ

ಪಂಡಿತರು ತಮ್ಮ ಸ್ವಂತ ಹಿತಾಸಕ್ತಿಗಳಿಗಾಗಿ ಸಮಾಜವನ್ನು ವಿಭಜಿಸಿದ್ದರು ಎಂದಿದ್ದ ಭಾಗವತ್

Update: 2023-02-07 17:29 GMT

ಪಾಟ್ನಾ,ಫೆ.7: ಪಂಡಿತರು ತಮ್ಮ ಸ್ವಂತ ಹಿತಾಸಕ್ತಿಗಳಿಗಾಗಿ ಸಮಾಜವನ್ನು ವಿಭಜಿಸಿದ್ದರು ಎಂಬ ಹೇಳಿಕೆಗಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ (Mohan Bhagwat) ವಿರುದ್ಧ ಬಿಹಾರದ ಮುಝಫ್ಫರ್‌ಪುರ ನ್ಯಾಯಾಲಯ(Muzaffarpur Court)ದಲ್ಲಿ ದೂರು ಪ್ರಕರಣ ದಾಖಲಾಗಿದೆ.

ಮುಝಫ್ಫರ್‌ಪುರದ ವಕೀಲ ಸುಧೀರ್ ಕುಮಾರ್(Sudhir Kumar) ಓಝಾ ಅವರು ಐಪಿಸಿಯ ವಿವಿಧ ಕಲಮ್‌ಗಳಡಿ ಈ ಪ್ರಕರಣವನ್ನು ದಾಖಲಿಸಿದ್ದಾರೆ. ಭಾಗವತ್ ಅವರ ಹೇಳಿಕೆಗಳು ಪಂಡಿತರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿವೆ ಎಂದು ಓಝಾ ಆರೋಪಿಸಿದ್ದಾರೆ.

ಪ್ರಕರಣವನ್ನು ಫೆ.20ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದು ಓಝಾ ಸುದ್ದಿಗಾರರಿಗೆ ತಿಳಿಸಿದರು.ರವಿವಾರ ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಾಗವತ್,ಜಾತಿಗಳನ್ನು ಪಂಡಿತರು ಸೃಷ್ಟಿಸಿದ್ದರು,ದೇವರಲ್ಲ. ದೇವರು ಮಾನವರನ್ನು ಸಮಾನವಾಗಿ ಸೃಷ್ಟಿಸಿದ್ದಾನೆ,ಆದರೆ ಪಂಡಿತರು ತಮ್ಮ ಸ್ವಂತ ಲಾಭಗಳಿಗಾಗಿ ಸಮಾಜವನ್ನು ವಿಭಜಿಸಿದ್ದರು ಎಂದು ಹೇಳಿದ್ದರು.

ಈ ನಡುವೆ ಆರೆಸ್ಸೆಸ್,ಭಾಗವತ್ ಅವರು ಯಾವುದೇ ನಿರ್ದಿಷ್ಟ ಜಾತಿಯನ್ನು ಪ್ರಸ್ತಾಪಿಸಿರಲಿಲ್ಲ ಮತ್ತು ‘ವಿದ್ವಾಂಸರನ್ನು’ ಉಲ್ಲೇಖಿಸಲು ‘ಪಂಡಿತ ’ಪದವನ್ನು ಬಳಸಿದ್ದರು,‘ಬ್ರಾಹ್ಮಣ ’ರನ್ನಲ್ಲ ಎಂದು ಸ್ಪಷ್ಟಪಡಿಸಿದೆ.

ದೇಶಾದ್ಯಂತ ಬಾಲಿವುಡ್ ನಟರಿಂದ ಹಿಡಿದು ರಾಜಕಾರಣಿಗಳವರೆಗೆ ಅವರ ವಿರುದ್ಧ ಸರಣಿ ದೂರುಗಳನ್ನು ದಾಖಲಿಸುವುದಕ್ಕೆ ಓಝಾ ಹೆಸರಾಗಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ನೋವು ಮತ್ತು ಸಾರ್ವಜನಿಕ ಶಾಂತಿ ಉಲ್ಲಂಘನೆಗೆ ಸಂಬಂಧಿಸಿದ ಐಪಿಸಿಯ ಕಲಂ 504 ಮತ್ತು 506ರಡಿ ಭಾಗವತರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಎಂದು ತನ್ನ ಅರ್ಜಿಯಲ್ಲಿ ಕೋರಿರುವ ಓಝಾ,ಅವರು ಮತಬ್ಯಾಂಕ ರಾಜಕೀಯದ ಮೇಲೆ ಕಣ್ಣಿಟ್ಟು ಈ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಸಮಾಜದಲ್ಲಿ ಒಡಕನ್ನುಂಟು ಮಾಡಲು ಉದ್ದೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Similar News