ಯಮುನಾ ಎಕ್ಸ್ಪ್ರೆಸ್ವೇನಲ್ಲಿ ವ್ಯಕ್ತಿಗೆ ಡಿಕ್ಕಿ ಹೊಡೆದು ಮೃತದೇಹವನ್ನು 10 ಕಿ.ಮೀ. ದೂರದವರೆಗೆ ಎಳೆದೊಯ್ದ ಕಾರು

Update: 2023-02-07 17:40 GMT

ಹೊಸದಿಲ್ಲಿ,ಫೆ.7: ಹಿಟ್‌ಆ್ಯಂಡ್ ರನ್ ಪ್ರಕರಣವೊಂದರಲ್ಲಿ ವೇಗವಾಗಿ ಧಾವಿಸಿಬಂದ ಕಾರೊಂದು ಯುವಕನೊಬ್ಬನಿಗೆ ಡಿಕ್ಕಿಹೊಡೆದು, ಮೃತದೇಹವನ್ನು ಯಮುನಾ ಎಕ್ಸ್‌ಪ್ರೆಸ್‌ವೇ(Yamuna Expressway) ಹೆದ್ದಾರಿಯಲ್ಲಿ ಹೆಚ್ಚುಕಮ್ಮಿ 10 ಕಿ.ಮೀ. ದೂರವರೆಗೆ ಎಳೆದುಕೊಂಡು ಹೋದ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ. ಮೃತದೇಹವನ್ನು ಎಳೆದುಕೊಂಡು ಹೋಗುತ್ತಿದ್ದ ಕಾರನ್ನು ಮಥುರಾ ಟೋಲ್ (Mathura Toll)ಬ್ಲಾಕ್ ಬಳಿ ನಿಲ್ಲಿಸಲಾಗಿದ್ದು, ವಾಹನದಲ್ಲಿ ನೇತಾಡುತ್ತಿದ್ದ ಮೃತದೇಹ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ನೊಯ್ಡದಿಂದ ಆಗ್ರಾಕ್ಕೆ ತೆರಳುತ್ತಿದ್ದ ಈ ಕಾರು ಮಥುರಾ ಟೋಲ್‌ಗೇಟ್ ಬಳಿಕ ನಿಂತಾಗ, ಅದರಲ್ಲಿ ಮಾನವಮೃತದೇಹ ಸಿಕ್ಕಿಹಾಕಿಕೊಂಡಿರುವುದು ಭದ್ರತಾಸಿಬ್ಬಂದಿಯ ಗಮನಕ್ಕೆ ಬಂದಿತು. ಈ ಕಾರನ್ನು ದಿಲ್ಲಿ ನಿವಾಸಿ ವಿರೇಂದ್ರ ಸಿಂಗ್ ಎಂಬಾತ ಚಲಾಯಿಸುತ್ತಿದ್ದು, ಆತನನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ.

ಸೋಮವಾರ ರಾತ್ರಿ ಮಥುರಾ ಎಕ್ಸ್‌ಪ್ರೆಸ್‌ವೇನಲ್ಲಿ ದಟ್ಟವಾದ ಮಂಜು ಆವರಿಸಿತ್ತು. ಆದ್ದರಿಂದ ಗೋಚರತೆಯು ಕ್ಷೀಣವಾಗಿದ್ದರಿಂದ ವ್ಯಕ್ತಿಯು ಆಪಘಾತಕ್ಕೀಡಾಗಿದ್ದಾನೆ ಹಾಗೂ ಆತನ ಮೃತದೇಹವು ಕಾರಿಗೆ ಸಿಕ್ಕಿಹಾಕಿಕೊಂಡಿತ್ತು ಎಂದು ದೇಹತ್ ವಿಭಾಗದ ಪೊಲೀಸ್ ಅಧೀಕ್ಷಕ ತ್ರಿಗುಣ್ ಬೈಸೆನ್ ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಪಾದರಕ್ಷೆಗಳು ಹಾಗೂ ಮೊಬೈಲ್ ಫೋನ್ ಯಮುನಾ ಎಕ್ಸ್‌ಪ್ರೆಸ್‌ವೇನ 106 ಮೈಲುಗಲ್ಲು ಸಮೀಪ ಪತ್ತೆಯಾಗಿದ್ದು, ಅಲ್ಲಿಯೇ ಅವಘಧ ನಡೆದಿರಬೇಕೆಂದು ಶಂಕಿಸಲಾಗಿದೆ.

ಪ್ರಕರಣದ ತನಿಖೆ ನಡೆಯುತ್ತಿದ್ದು, ಘಟನೆ ನಡೆದ ಪರಿಸರದ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಮೃತ ವ್ಯಕ್ತಿಯ ಗುರುತನ್ನು ದೃಢಪಡಿಸಲು ಪೊಲೀಸರು ಆಸುಪಾಸಿನ ಗ್ರಾಮಗಳ ಜನರನ್ನು ವಿಚಾರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನವರಿ 1ರಂದು ದಿಲ್ಲಿಯ ಕಾಂಜಾವಾಲಾ ಪ್ರದೇಶದಲ್ಲಿ 20 ವರ್ಷದ ಯುವತಿಯೊಬ್ಬಳ ಮೃತದೇಹವು ಕಾರಿನಲ್ಲಿ ಸಿಕ್ಕಿಕೊಂಡು 12 ಕಿ.ಮೀ.ದೂರದವರೆಗೆ ಎಳೆಯಲ್ಪಟ್ಟ ದಾರುಣ ಘಟನೆಯನ್ನೇ ಈ ಪ್ರಕರಣ ನೆನಪಿಸಿದೆ. ಈ ಘಟನೆಯು ದಿಲ್ಲಿಯಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಏಳು ಮಂದಿಯನ್ನು ಬಂಧಿಸಿ, ಅವರ ವಿರುದ್ದ ಪ್ರಕರಣ ದಾಖಲಿಸಿತ್ತು.

Similar News