ಪೊಲೀಸ್ ಕಸ್ಟಡಿಯಲ್ಲಿರುವ ಮಹಿಳೆಯ ಕನ್ಯತ್ವ ಪರೀಕ್ಶೆನಡೆಸುವುದು ಅಸಾಂವಿಧಾನಿಕ: ದಿಲ್ಲಿ ಹೈಕೋರ್ಟ್

Update: 2023-02-07 17:50 GMT

ಹೊಸದಿಲ್ಲಿ,ಫೆ.7: ನ್ಯಾಯಾಂಗ ಬಂಧನ ಅಥವಾ ಪೊಲೀಸ್ ಕಸ್ಟಡಿಯಲ್ಲಿರುವ ಮಹಿಳೆಯ ಕನ್ಯತ್ವ ಪರೀಕ್ಷೆ ನಡೆಸುವುದು ಅಸಾಂವಿಧಾನಿಕವೆಂದು ದಿಲ್ಲಿ ಹೈಕೋರ್ಟ್(Delhi High Court) ಮಂಗಳವಾರ ಪ್ರತಿಪಾದಿಸಿದೆ.

ತನ್ನ ಮೇಲೆ 2009ರಲ್ಲಿ ನಡೆಸಲಾಗಿದ್ದ ಕನ್ಯತ್ವ ಪರೀಕ್ಷೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಿಸ್ಟರ್ ಸೆಫಿ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

 ಸೆಫಿ ಅವರು 1992ರಲ್ಲಿ ಕೇರಳದಲ್ಲಿ ನಡೆದ ಕ್ರೈಸ್ತ ಭಗಿನಿ ಅಭಯಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ಸಿಸ್ಟರ್ ಅಭಯಾ ಅವರ ಮೃತದೇಹ 1992ರ ಮಾರ್ಚ್ 17ರಂದು ಕೊಟ್ಟಾಯಂನ ಸೈಂಟ್ ಪಿಯೂಸ್ ಕಾನ್ವೆಂಟ್‌ನ ಬಾವಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಲ್ಲಿ ಆರೋಪಿಗಳಾದ ಫಾದರ್ ಕೊಟ್ಟೂರ್ ಹಾಗೂ ಸೆಫಿ ಅವರಿಗೆ 2020ರಲ್ಲಿ ಸಿಬಿಐನ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಆದರೆ ಕಳೆದ ವರ್ಷ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಅಮಾನತಿನಲ್ಲಿರಿಸಿತ್ತು.

ಸೆಫಿ ಹಾಗೂ ಕೊಟ್ಟೂರು ನಡುವೆ ಇತ್ತೆನ್ನಲಾದ ಲೈಂಗಿಕ ಸಂಬಂಧವನ್ನು ಮರೆಮಾಚಲು ಅಭಯಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಸಿಬಿಐ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿತ್ತು. ಸಿಸ್ಟರ್‌ಸೆಫಿ ಅವರ ಮೇಲೆ ನಡೆಸಲಾದ ಕನ್ಯತ್ವ ಪರೀಕ್ಷೆಯ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ನ್ಯಾಯಾಲಯ ಈ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಿಸ್ಟರ್ ಸೆಫಿ ದಿಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮಂಗಳವಾರ ನಡೆದ ವಿಚಾರಣೆಯ ವೇಳೆ ದಿಲ್ಲಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಕಸ್ಟಡಿಯಲ್ಲಿರುವ ವ್ಯಕ್ತಿಯ ಮೂಲಭೂತ ಘನತೆಯನ್ನು ಎತ್ತಿಹಿಡಿಯಬೇಕಾಗಿದ್ದು, ಈ ಪ್ರಕರಣದಲ್ಲಿ ಆ ನಿಯಮವನ್ನು ಉಲ್ಲಂಘಿಸಲಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿತ್ತು. ಮಾನವಹಕ್ಕುಗಳ ಉಲ್ಲಂಘನೆಗಾಗಿ ಪರಿಹಾರವನ್ನು ಕೋರುವುದಕ್ಕೂ ಹೈಕೋರ್ಟ್ ಸೆಫಿ ಅವರಿಗೆ ಅನುಮತಿ ನೀಡಿದೆ.

ಆದರೆ ಸಿಬಿಐ, ಪ್ರಾದೇಶಿಕ ಕಾರ್ಯವ್ಯಾಪ್ತಿಯನ್ನು ಉಲ್ಲೇಖಿಸಿ ನ್ಯಾಯಾಲಯದ ಈ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ದಿಲ್ಲಿ ಮೂಲದ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದಂತಹ ಪ್ರಾಧಿಕಾರಗಳು ಈ ಪ್ರಕರಣದ ಸಕ್ರಿಯ ಪಾತ್ರವಹಿಸಿರುವ ಬಗ್ಗೆ ನ್ಯಾಯಾಲಯ ಗಮನಸೆಳೆಯಿತು.

ತನಿಖೆಯು ಸಿಬಿಐಗೆ ಹಸ್ತಾಂತರಗೊಳ್ಳುವ ಮುನ್ನ ಇದೊಂದು ಆತ್ಮಹತ್ಯೆ ಪ್ರಕರಣವೆಂಬ ತೀರ್ಮಾನಕ್ಕೆ ಕೇರಳ ಪೊಲೀಸರು ಬಂಧಿದ್ದರು. ಪ್ರಕರಣದ ತನಿಖೆಯನ್ನು ನಡೆಸಿದ ಸಿಬಿಐ 2008ರಲ್ಲಿ ಕೊಟ್ಟೂರ್, ಸೆಫಿ ಹಾಗೂ ಫಾದರ್ ಜೋಸ್ ಪೂತ್ರುಕಯಿಲ್‌ಅವರನ್ನು ಆರೋಪಿಗಳೆಂದು ಪರಿಗಣಿಸಿತ್ತು. ಸಿಸ್ಟರ್ ಅಭಯಾ ಅವರ ಕೊಲೆ, ಸಾಕ್ಷಾಧಾರಗಳ ನಾಶ ಹಾಗೂ ಕ್ರಿಮಿನಲ್ ಸಂಚಿನ ಆರೋಪಗಳನ್ನು ಈ ಮೂವರ ಮೇಲೆ ಹೊರಿಸಿತ್ತು.

2009ರ ಜುಲೈನಲ್ಲಿ ಸಲ್ಲಿಸಲಾದ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯು ಪ್ರಕರಣದ ಬಗ್ಗೆ ವಿವರಿಸುತ್ತಾ, ಸಿಸ್ಟರ್‌ಸೆಫಿ ಹಾಗೂ ಇತರ ಇಬ್ಬರು ಪಾದ್ರಿಗಳು,ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಸಿಸ್ಟರ್ ಅಭಯಾ ಆಕಸ್ಮಿಕವಾಗಿ ಅಲ್ಲಿಗೆ ಬಂದಿದ್ದರು. ಇದರಿಂದ ಗಾಬರಿಬಿದ್ದ ಸಿಸ್ಟರ್‌ಸೆಫಿಯಾ ಅವರು, ಕ್ಷಣಿಕ ಆವೇಶದಿಂದಾಗಿ ಅಭಯಾ ಅವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಆನಂತರ ಈ ಮೂವರು ಆರೋಪಿಗಳು ಅಭಯಾ ಅವರ ಶವವನ್ನು ಬಾವಿಗೆ ಎಸೆದಿದ್ದರೆಂದು ಸಿಬಿಐ ಆರೋಪಿಸಿತ್ತು.

Similar News