​ಸುಳ್ಳೇ ಮನೆ ದೇವರು, ಹಿಂಸೆಯೇ ಬಿಜೆಪಿಯ ತತ್ವ: ಬಿ.ಕೆ. ಹರಿಪ್ರಸಾದ್

Update: 2023-02-08 14:12 GMT

ಕುಂದಾಪುರ: ಬಿಜೆಪಿ ಧರ್ಮಾಧಾರಿತವಾಗಿ ರಾಜಕಾರಣ ಮಾಡುತ್ತಿದ್ದು, ಸುಳ್ಳು ಅವರ ಮನೆ ದೇವರು. ಹಿಂಸೆ ಅವರ ತತ್ವ ಆಗಿದ್ದು, ಬಡವರ ಮಕ್ಕಳನ್ನು ಬಾವಿಗೆ ದೂಡಿ ಆಳ ನೋಡುವ ಕೀಳುಮಟ್ಟದ ಮನಸ್ಥಿತಿ ಅವರದ್ದಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂದರ್ತಿ ಸಮೀಪದ ಮೈರಕೊಮೆಯಲ್ಲಿ ಬುಧವಾರ ನಡೆದ ಕರಾವಳಿ ಪ್ರಜಾಧ್ವನಿ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಕ್ಕಳ ಕೈಯಲ್ಲಿ ಪೆನ್ನು ಪೇಪರ್ ನೀಡಿ ಸುಶಿಕ್ಷಿತರನ್ನಾಗಿ ಮಾಡಬೇಕು ಹೊರತು ಆಯುಧ ನೀಡಿ ಭಯೋತ್ಪಾಧ ಕರನ್ನಾಗಿಸುವ ಹುನ್ನಾರ ಮಾಡುತ್ತಿರುವ ಬಿಜೆಪಿಗರಿಗೆ ಜನರು ತಕ್ಕ ಶಾಸ್ತಿ ಮಾಡಬೇಕು ಎಂದರು.

ಕುಂದ ಕನ್ನಡ ಅಭಿವೃದ್ಧಿಗೆ ಈವರೆಗೆ ಪ್ರಾಧಿಕಾರ ರಚಿಸಿ ಭಾಷೆಯನ್ನು ಉನ್ನತಿಗೇರಿಸುವ ಪ್ರಯತ್ನಕ್ಕೆ ಜನಪ್ರತಿನಿಧಿಗಳು ಹೋಗಿಲ್ಲ. ಬಹುಕಾಲದ ಬೇಡಿಕೆಯಾದ ಕುಂದಾಪುರ-ಗಂಗೊಳ್ಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಕಾಯಕಲ್ಪ ಒದಗಿಸದೇ ಇರುವುದು ಜನರಿಂದ ಮತ ಪಡೆದು ಹಲವು ಬಾರೀ ಗೆದ್ದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.

ಎಐಸಿಸಿ ಕಾರ್ಯದರ್ಶಿ ರೋಝಿ ಎಂ.ಜಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಎಸ್.ರಾಜು ಪೂಜಾರಿ, ಮುಖಂಡರಾದ ಶೇಖರ್ ಪೂಜಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಶೋಕ್ ಪೂಜಾರಿ ಬೀಜಾಡಿ, ಶ್ಯಾಮಲಾ ಭಂಡಾರಿ, ಕಿಶೋರ್, ಮಮತಾ ಶೆಟ್ಟಿ ಮೊದಲಾದವರಿದ್ದರು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ.ಕುಂದರ್ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಕೋಟದಲ್ಲಿ ಪ್ರಜಾಧ್ವನಿ ಸಮಾವೇಶ
ಕೋಟ ಮಾಂಗಲ್ಯ ಕಲ್ಯಾಣಮಂಟಪದ ಎದುರು ಬುಧವಾರ ಜರಗಿದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಅನೈತಿಕವಾಗಿ ಸರಕಾರ ರಚಿಸಿದ ಬಿಜೆಪಿಯಲ್ಲಿ ಭೃಷ್ಟಾಚಾರ ಮಿತಿಮೀರಿದ್ದು ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಜಿಲ್ಲೆಯ ಇಬ್ಬರು ಸಚಿವರು ಮಾಡಿದ ಕೆಲಸವೇನು ಎಂಬ ಬಗ್ಗೆ ಪಟ್ಟಿ ನೀಡಲಿ. ನೆಟ್ಟಾರು ಕೊಲೆ ಪ್ರಕರಣದಲ್ಲಿ ಮೊದಲಿಗೆ ನಳೀನ್ ಕುಮಾರ್ ಕಟೀಲ್ ಅವರನ್ನು ಮಂಪರು ಪರೀಕ್ಷೆ ಮಾಡಬೇಕೆಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಭಾವನಾತ್ಮಕ ವಿಚಾರಗಳನ್ನು ಬಂಡವಾಳ ಮಾಡಿಕೊಂಡು ಜನರನ್ನು ದಿಕ್ಕುತಪ್ಪಿಸುವ  ಕೆಲಸ ಬಿಜೆಪಿ ಮಾಡುತ್ತಿದೆ. ಒಂದೂವರೆ ವರ್ಷ ಮುಗಿದರೂ ಜಿ.ಪಂ ಹಾಗೂ ತಾ.ಪಂ ಚುನಾವಣೆ ಮಾಡುವ ಧೈರ್ಯ ಬಿಜೆಪಿಗಿಲ್ಲ. ದ್ವೇಷದ ಮನೋಭಾವನೆ ಬಿಟ್ಟು ಎಲ್ಲರು ಪರಸ್ಪರ ಅನ್ಯೋನ್ಯತೆಯಿಂದ ಬಾಳಬೇಕು.

‘ಬಿಜೆಪಿಯವರು ಸುಳ್ಳನ್ನು ಜನರಿಗೆ ಮುಟ್ಟಿಸುವ ಕೀಳು ಮಟ್ಟದ ರಾಜಕಾರಣ ಮಾಡುತ್ತಾರೆ. ಬಿಜೆಪಿಯವರ ಸುಳ್ಳಿನ ವಾಟ್ಸಾಪ್ ಯುನಿವರ್ಸಿಟಿಗೆ ತಕ್ಕ ಉತ್ತರ ನೀಡಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರೇಶ್ ಮೇಸ್ತ ಎಂಬ ಯುವಕನ ಸಾವನ್ನು ಮುಂದಿಟ್ಟುಕೊಂಡು ಸುಳ್ಳಿನ ಸರಮಾಲೆ ಮೂಲಕ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಕಾರ್ಯ ಮಾಡಿತ್ತು. ಕರಾವಳಿ ಭಾಗದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಒಮ್ಮತದ ಹೋರಾಟ ಅಗತ್ಯವಿದೆ’
-ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯರು

Similar News