ಮಸೀದಿಗಳಲ್ಲಿ ಮುಸ್ಲಿಮ್ ಮಹಿಳೆಯರಿಗೆ ಪ್ರವೇಶ ನಿಷೇಧಿಸಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಎಐಎಂಪಿಎಲ್‌ಬಿ

Update: 2023-02-08 15:31 GMT

ಹೊಸದಿಲ್ಲಿ,ಫೆ.8: ಮುಸ್ಲಿಮ್ ಮಹಿಳೆಯರು ಮಸೀದಿಗಳನ್ನು ಪ್ರವೇಶಿಸುವುದನ್ನು ಮತ್ತು ನಮಾಝ್ ಅಥವಾ ಸಾಮೂಹಿಕ ಪ್ರಾರ್ಥನೆಗಳನ್ನು ಸಲ್ಲಿಸುವುದನ್ನು ನಿಷೇಧಿಸಲಾಗಿಲ್ಲ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದೆ.

ಆದರೂ,ಒಂದೇ ಸಾಲಿನಲ್ಲಿ ಅಥವಾ ಸಾಮಾನ್ಯ ಸ್ಥಳದಲ್ಲಿ ಪುರುಷರು ಮತ್ತು ಮಹಿಳೆಯರು ಮುಕ್ತವಾಗಿ ಬೆರೆಯುವುದು ಇಸ್ಲಾಮ್‌ನಲ್ಲಿ ಸೂಚಿಸಲಾಗಿರುವ ನಿಲುವಿಗೆ ಅನುಗುಣವಾಗಿಲ್ಲ. ಸಾಧ್ಯವಾದರೆ ಮಸೀದಿ ಆಡಳಿತ ಸಮಿತಿಯು ಆವರಣದಲ್ಲಿ ಮಹಿಳೆರಿಗಾಗಿ ಪ್ರತ್ಯೇಕ ಜಾಗವನ್ನು ಸೃಷ್ಟಿಸುವುದು ಅಗತ್ಯವಾಗುತ್ತದೆ ಎಂದು ಮಂಡಳಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.
ನಮಾಝ್ ಸಲ್ಲಿಸಲು ಮಸೀದಿಗಳಿಗೆ ಮುಸ್ಲಿಮ್ ಮಹಿಳೆಯರ ಪ್ರವೇಶಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾಗಿರುವ ಎರಡನೇ ಅರ್ಜಿಗೆ ಉತ್ತರವಾಗಿ ಮಂಡಳಿಯು ಅಫಿಡವಿಟ್‌ನ್ನು ಸಲ್ಲಿಸಿದೆ.

ಇತ್ತೀಚಿನ ಅರ್ಜಿಯಲ್ಲಿ ಅರ್ಜಿದಾರರು ಉಲ್ಲೇಖಿಸಿರುವ ಮೆಕ್ಕಾದ ಕಾಬಾದ ಸುತ್ತಲಿನ ತವಾಫ್‌ನ ಉದಾಹರಣೆಯು ನಮಾಝ್‌ಗೆ ಸಂಬಂಧಿಸಿದಂತೆ ತಪ್ಪುದಾರಿಗೆ ಎಳೆಯುವಂಥದ್ದಾಗಿದೆ ಎಂದೂ ಮಂಡಳಿಯು ಸ್ಪಷ್ಟಪಡಿಸಿದೆ.

ಮೆಕ್ಕಾದಲ್ಲಿಯೂ ಪವಿತ್ರ ಕಾಬಾದ ಸುತ್ತಲಿನ ಎಲ್ಲ ಮಸೀದಿಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶದ ವಾಡಿಕೆಯು ಅಸ್ತಿತ್ವದಲ್ಲಿದೆ. ಇದೇ ರೀತಿ,ಭಾರತದಲ್ಲಿಯ ಮಸೀದಿಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಅವಲಂಬಿಸಿ ಹಾಗೂ ಅಸಿತ್ವದಲ್ಲಿರುವ ಕಟ್ಟಡಗಳು ಮತ್ತು ಆವರಣಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಕಲ್ಪಿಸಲು ಅನುಕೂಲತೆಯಿದ್ದಲ್ಲಿ ಆಡಳಿತ ಸಮಿತಿಗಳು ಅಂತಹ ವ್ಯವಸ್ಥೆಯನ್ನು ಏರ್ಪಡಿಸಲು ಸ್ವತಂತ್ರವಾಗಿವೆ ಎಂದು ಮಂಡಳಿಯು ತನ್ನ ಉತ್ತರದಲ್ಲಿ ತಿಳಿಸಿದೆ.

ಅಲ್ಲದೆ,ಎಲ್ಲಿಯೇ ನೂತನ ಮಸೀದಿಗಳನ್ನು ನಿರ್ಮಿಸಿದಾಗ ಮಹಿಳೆಯರಿಗೆ ಸೂಕ್ತ ಸ್ಥಳಾವಕಾಶವನ್ನು ಕಲ್ಪಿಸುವ ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳುವಂತೆ ಮಂಡಳಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಉತ್ತರದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಮನವಿ ಮಾಡಿಕೊಂಡಿದೆ.

Similar News