×
Ad

ಕರ್ನಾಟಕ-ಮಹಾರಾಷ್ಟ್ರದ ಬೆಳಗಾವಿ ಗಡಿ ವಿವಾದ ಆಲಿಕೆಯಿಂದ ಹಿಂದೆ ಸರಿದ ಸುಪ್ರೀಂ ನ್ಯಾಯಾಧೀಶೆ ನಾಗರತ್ನ

Update: 2023-02-08 21:14 IST

ಹೊಸದಿಲ್ಲಿ, ಫೆ. 8: ಮಹಾರಾಷ್ಟ್ರ-ಕರ್ನಾಟಕದ ಬೆಳಗಾವಿ ಗಡಿ ವಿವಾದದ ಆಲಿಕೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಬಿ.ವಿ. ನಾಗರತ್ನ ಅವರು ಬುಧವಾರ ಹಿಂದೆ ಸರಿದಿದ್ದಾರೆ. ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್, ಹೃಷಿಕೇಶ್ ರಾಯ್ ಹಾಗೂ ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು. ರಾಜ್ಯ ಪುನರ್ರಚನಾ ಕಾಯ್ದೆ-1956ರ 3,7 ಹಾಗೂ 8ನೇ ಸೆಕ್ಷನ್ಗಳ ನಿರ್ದಿಷ್ಟ ಭಾಗಗಳನ್ನು ಬಹಿರಂಗಪಡಿಸುವಂತೆ ಕೋರಿ ಮಹಾರಾಷ್ಟ್ರ ಸರಕಾರ 2004ರಲ್ಲಿ ಅರ್ಜಿ ಸಲ್ಲಿಸಿತ್ತು. 

ಈ ಕಾಯ್ದೆ ಭಾಷಾವಾರು ರಾಜ್ಯ ಪುನಾರ್ರಚನೆಗೆ ಸಂಬಂಧಿಸಿದ್ದಾಗಿದೆ. ಕರ್ನಾಟಕದ ಐದು ಜಿಲ್ಲೆಗಳ 865 ಗ್ರಾಮಗಳು ಹಾಗೂ ಸ್ಥಳಗಳು ಮರಾಠಿ ಮಾತನಾಡುವ ಜನರನ್ನು ಒಳಗೊಂಡಿದೆ. ಆದುದರಿಂದ ಅದು ಕರ್ನಾಟಕದ ಭಾಗವಾಗಬಾರದು. ಮಹಾರಾಷ್ಟ್ರದ ಭಾಗವಾಗಬೇಕು ಎಂಬ ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಸೆಕ್ಷನ್ನ ಈ ಭಾಗವನ್ನು ಪ್ರಶ್ನಿಸಿತ್ತು. ಎರಡು ರಾಜ್ಯಗಳ ರಾಜ್ಯ ಸರಕಾರಗಳ ನಡುವಿನ ವಿವಾದವನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ಗೆ ಅಧಿಕಾರ ನೀಡುವ ಸಂವಿಧಾನ 131 ವಿಧಿಯನ್ನು ಉಲ್ಲೇಖಿಸಿದ ಮಹಾರಾಷ್ಟ್ರ ಸರಕಾರ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಭಾಗಿಯಾದ ವಿವಾದದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ಗೆ ಕಾರ್ಯ ವ್ಯಾಪ್ತಿ ಇದೆ ಎಂದು ಹೇಳಿತು. 

ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕರ್ನಾಟಕ ಸರಕಾರ, ಸಂವಿಧಾನದ 3ನೇ ಪರಿಚ್ಛೇದದ ಅಡಿಯಲ್ಲಿ ರಾಜ್ಯದ ಗಡಿಗಳನ್ನು ನಿರ್ಧರಿಸಲು ಸಂಸತ್ತಿಗೆ ಮಾತ್ರ ಅಧಿಕಾರ ಇದೆ. ಸುಪ್ರೀಂ ಕೋರ್ಟ್ಗೆ ಇಲ್ಲ ಎಂದು ಹೇಳಿತು. ತನ್ನ ಗಡಿಯೊಳಗೆ ಬದಲಾವಣೆಯನ್ನು ಪ್ರಶ್ನಿಸುವ ಕಾನೂನಾತ್ಮಕ ಹಕ್ಕು ರಾಜ್ಯಕ್ಕೆ ಇಲ್ಲ ಎಂದು ಅದು ಪ್ರತಿಪಾದಿಸಿತ್ತು. 

Similar News