ಟಿವಿ ನಿರೂಪಕ ದೀಪಕ್‌ ಚೌರಾಸಿಯಾ ವಿರುದ್ಧ ಎರಡನೇ ಬಾರಿ ಬಂಧನ ಆದೇಶ ಹೊರಡಿಸಿದ ನ್ಯಾಯಾಲಯ

‘ಆದಿತ್ಯನಾಥ್ ಸಂದರ್ಶನ’ಕ್ಕಾಗಿ ವಿನಾಯಿತಿ ಕೋರಿಕೆಗೆ ತಿರಸ್ಕಾರ

Update: 2023-02-08 18:19 GMT

ಹೊಸದಿಲ್ಲಿ,ಫೆ.8: ಆಸಾರಾಮ ಬಾಪು ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವರದಿ ಸಂದರ್ಭದಲ್ಲಿ 10 ಹರೆಯದ ಬಾಲಕಿ ಮತ್ತು ಆಕೆಯ ಕುಟುಂಬದ ‘ತಿರುಚಲಾಗಿದ್ದ, ಎಡಿಟ್ ಮಾಡಲಾಗಿದ್ದ ಮತ್ತು ಅಶ್ಲೀಲ ’ ಫೂಟೇಜ್ನ ಪ್ರಸಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುದ್ದಿವಾಹಿನಿಯ ನಿರೂಪಕ ದೀಪಕ ಚೌರಾಸಿಯಾ ವಿರುದ್ಧ ಗುರುಗ್ರಾಮದ ಪೊಕ್ಸೊ ನ್ಯಾಯಾಲಯವು ಜಾಮೀನುರಹಿತ ಬಂಧನ ಆದೇಶವನ್ನು ಹೊರಡಿಸಿದೆ.

ವಿಚಾರಣೆಯ ದಿನವಾದ ಫೆ.4ರಂದು ತನಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಸಂದರ್ಶನ ನಡೆಸಬೇಕಿದ್ದರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿ ಚೌರಾಸಿಯಾ ಅರ್ಜಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರೆನ್ನಲಾಗಿದೆ. ಉ.ಪ್ರ.ಮುಖ್ಯಮಂತ್ರಿಗಳ ಕಚೇರಿಯಿಂದ ತನಗೆ ಬಂದಿದ್ದ ಇ-ಮೇಲ್ ಅನ್ನು ಚೌರಾಸಿಯಾ ಅರ್ಜಿಯೊಂದಿಗೆ ಲಗತ್ತಿಸಿದ್ದರು.

ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯು ಯಾವುದೇ ಅಫಿಡವಿಟ್ನಿಂದ ಬೆಂಬಲಿಸಲ್ಪಟ್ಟಿರಲಿಲ್ಲ ಮತ್ತು ಮನವರಿಕೆಯಾಗಬಲ್ಲ ಯಾವುದೇ ದಾಖಲೆ ಪುರಾವೆಗಳಿರಲಿಲ್ಲ ಎಂದು ನ್ಯಾ.ಶಶಿ ಚೌಹಾಣ್ ಹೇಳಿದರು. ಚೌರಾಸಿಯಾ ಸಲ್ಲಿಸಿದ್ದ ಇ-ಮೇಲ್ ಸಂದೇಶ ಅವರ ವಿಳಾಸವನ್ನು ಹೊಂದಿರಲಿಲ್ಲ, ಬೇರೊಬ್ಬ ವ್ಯಕ್ತಿಯ ವಿಳಾಸವನ್ನು ಹೊಂದಿತ್ತು ಎನ್ನುವುದನ್ನೂ ನ್ಯಾಯಾಧೀಶರು ಗಮನಿಸಿದರು.

ಕಳೆದ ಮೂರು ತಿಂಗಳುಗಳಲ್ಲಿ ಇದು ನ್ಯಾಯಾಲಯವು ಚೌರಾಸಿಯಾ ವಿರುದ್ಧ ಹೊರಡಿಸಿರುವ ಎರಡನೇ ಬಂಧನಾದೇಶವಾಗಿದೆ. ಅನಾರೋಗ್ಯದ ಕಾರಣವೊಡ್ಡಿ ಚೌರಾಸಿಯಾ ವಿಚಾರಣೆಗೆ ಗೈರುಹಾಜರಾದ ಬಳಿಕ ಕಳೆದ ವರ್ಷದ ಅ.28ರಂದು ಅವರ ವಿರುದ್ಧ ಮೊದಲ ಜಾಮೀನುರಹಿತ ಬಂಧನಾದೇಶವನ್ನು ಹೊರಡಿಸಲಾಗಿತ್ತು.

ಬಳಿಕ ಚೌರಾಸಿಯಾ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು. ಗುರುಗ್ರಾಮ ನ್ಯಾಯಾಲಯವೀಗ ಅವರ ಜಾಮೀನು ಮತ್ತು ಭದ್ರತೆ ಬಾಂಡ್ಗಳನ್ನು ರದ್ದುಗೊಳಿಸಿದೆ. ಪ್ರಕರಣ ದಾಖಲಾದಾಗ ಚೌರಾಸಿಯಾ ನ್ಯೂಸ್ ನೇಷನ್ನಲ್ಲಿ ಸುದ್ದಿ ನಿರೂಪಕರಾಗಿದ್ದು,ಬಳಿಕ ಝೀ ನ್ಯೂಸ್ಗೆ ಸೇರಿದ್ದರು.

Similar News