ಒಳಚರಂಡಿ ಸ್ವಚ್ಛತೆ ವೇಳೆ ಜೀವ ಕಳೆದುಕೊಂಡವರೆಷ್ಟು ಗೊತ್ತೇ?

Update: 2023-02-09 02:27 GMT

ಹೊಸದಿಲ್ಲಿ; ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ದೇಶಾದ್ಯಂತ 2018ರಿಂದ 2022ರ ಅವಧಿಯಲ್ಲಿ 308 ಮಂದಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಬುಧವಾರ ರಾಜ್ಯಸಭೆಯಲ್ಲಿ ಬಹಿರಂಗಪಡಿಸಿದೆ.

ತಮಿಳುನಾಡಿನಲ್ಲಿ ಪೌರಕಾರ್ಮಿಕರ ಸಾವಿನ ಸಂಖ್ಯೆ ಗರಿಷ್ಠವಾಗಿದ್ದು, ಈ ಅವಧಿಯಲ್ಲಿ 52 ಮಂದಿ ಜೀವ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ (46) ಮತ್ತು ಹರ್ಯಾಣ (40) ನಂತರದ ಸ್ಥಾನಗಳಲ್ಲಿವೆ.

ಪೌರಕಾರ್ಮಿಕರು ಇಂಥ ಸ್ವಚ್ಛತಾ ಕಾರ್ಯವನ್ನು ದೈಹಿಕವಾಗಿ ಮಾಡುವ ಬದಲು ಯಂತ್ರದ ಸಹಾಯದಿಂದ ಮಾಡುವ ಸ್ವಚ್ಛತಾ ವಿಧಾನಕ್ಕೆ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ರಾಮದಾಸ್ ಅಠಾವಳೆ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ನ್ಯಾಷನಲ್ ಅ್ಯಕ್ಷನ್‌ಪ್ಲನ್ ಫಾರ್ ಮೆಕನೈಸ್ಡ್ ಸ್ಯಾನಿಟೇಷನ್ ಎಕೋಸಿಸ್ಟಂ (ನಮಸ್ತೆ) ಯಡಿ ಹಲವು ಅಂಶಗಳ ಅನುಷ್ಠಾನ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಒಳಚರಂಡಿ/ಸೆಪ್ಟಿಕ್ ಟ್ಯಾಂಕ್ ಸ್ವಚ್ಛತಾ ಕಾರ್ಮಿಕರನ್ನು ಗುರುತಿಸುವುದು ಮತ್ತು ಅವರನ್ನು ಪ್ರಧಾನಮಂತ್ರಿ ಜನ ಆರೋಗ್ಯ ಯೊಜನೆಯಂಥ ಅರೋಗ್ಯ ವಿಮಾ ಸೌಲಭ್ಯದ ಪ್ರಯೋಜನಗಳಿಗೆ ಸಂಪರ್ಕಿಸುವುದು ಸೇರಿದೆ ಎಂದು ವಿವರ ನೀಡಿದ್ದಾರೆ.

ನಮಸ್ತೆ ಯೋಜನೆಯನ್ನು ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಕ್ರಿಯಾ ಯೋಜನೆಯಡಿ ನೈರ್ಮಲ್ಯ ಕಾರ್ಮಿಕರು ಸ್ವಚ್ಛತಾ ಸಂಬಂಧಿ ಸಾಧನಗಳನ್ನು ಖರೀದಿಸಲು ನೆರವು ಮತ್ತು ಸಬ್ಸಿಡಿ ನೀಡುವ ಮೂಲಕ ಯಾಂತ್ರೀಕರಣ ಮತ್ತು ಉದ್ಯಮ ಅಭಿವೃದ್ಧಿಯನ್ನು ಉತ್ತೇಜಿಸಲಾಗುತ್ತದೆ ಎಂದು ತಿಳಿಸಿದರು.

Similar News