ರಾಜ್ಯಪಾಲರಿಂದ ಮಮತಾ ಬ್ಯಾನರ್ಜಿ ಗುಣಗಾನ: ಬಿಜೆಪಿ ಸಭಾತ್ಯಾಗ!

Update: 2023-02-09 02:45 GMT

ಕೊಲ್ಕತ್ತಾ: ಬಂಗಾಳದಲ್ಲಿ ಕೆಲ ವರ್ಷಗಳಿಂದ ಇದ್ದ ಮುಖ್ಯಮಂತ್ರಿ ಕಚೇರಿ ಹಾಗೂ ರಾಜಭವನದ ನಡುವಿನ ದ್ವೇಷದ ವಾತಾವರಣ, ನೂತನ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವಧಿಯಲ್ಲಿ ತಿಳಿಯಾಗಿದ್ದು, ರಾಜ್ಯಪಾಲರು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಸಾಧನೆಗಳನ್ನು ವಿಧಾನಮಂಡಲವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮುಕ್ತಕಂಠದಿಂದ ಶ್ಲಾಘಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ ಮಾಡಿದರು.

2019 ರಿಂದ 2022ರವರೆಗೆ ರಾಜ್ಯಪಾಲರಾಗಿದ್ದ ಜೈದೀಪ್ ಧನ್ಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಂಬಂಧ ಈ ಅವಧಿಯಲ್ಲಿ ಹದಗೆಟ್ಟಿತ್ತು. ಟಿಎಂಸಿ, ರಾಜ್ಯಪಾಲರನ್ನು ಬಿಜೆಪಿ ಏಜೆಂಟ್ ಎಂದು ಟೀಕಿಸುತ್ತಾ ಬಂದಿತ್ತು.

ಬಜೆಟ್ ಅಧಿವೇಶನ ಆರಂಭದ ದಿನ ಸದನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು ಟಿಎಂಸಿ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದರು. ಆದರೆ ಬಿಜೆಪಿ ಮುಖಂಡ ಹಾಗೂ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂಧು ಅಧಿಕಾರಿ, ರಾಜ್ಯದ ಸ್ಥಿತಿಗತಿಗಳ ಬಗ್ಗೆ ಒಳ್ಳೆಯ ಚಿತ್ರಣ ನೀಡುವ ಭಾಷಣದಿಂದ ರಾಜ್ಯಪಾಲರು ವಿಮುಖರಾಗಿಲ್ಲ; ಇದು ಅತೀವ ಬೇಸರ ತಂದಿದೆ ಎಂದು ’ಗೋ ಬ್ಯಾಕ್’ ಘೋಷಣೆಗಳನ್ನು ಕೂಗುತ್ತಾ ಸಭೆಯಿಂದ ಹೊರ ನಡೆದರು.

"ನನ್ನ ಮುಖ್ಯಮಂತ್ರಿಯ ಉಸ್ತುವಾರಿಯಲ್ಲಿ ಹಿಂದಿನ ವರ್ಷ ಅತ್ಯಂತ ಶಾಂತಿಯುತವಾಗಿ ಕಳೆದಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಕೋಮು ಸಾಮರಸ್ಯವನ್ನು ನಿರ್ವಹಿಸುವಲ್ಲಿ ಸರ್ಕಾರ ಸದಾ ಜಾಗೃತ ಸ್ಥಿತಿಯಲ್ಲಿದೆ. ಎಲ್ಲ ಧರ್ಮಗಳ ಧಾರ್ಮಿಕ ಆಚರಣೆಗಳನ್ನು ಆತ್ಮೀಯವಾಗಿ ಆಚರಿಸಲಾಗುತ್ತಿದೆ. ಇದು ಸಮೃದ್ಧ ವೈವಿಧ್ಯತೆಯ ಪ್ರತಿಬಿಂಬ" ಎಂದು ರಾಜ್ಯಪಾಲರು ಬಣ್ಣಿಸಿರುವುದನ್ನು ಬಿಜೆಪಿ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು.

ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗಿ, ಟಿಎಂಸಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕಾಗದಗಳನ್ನು ಸದನದಲ್ಲಿ ಎಸೆದು ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಬಳಿಕ ಸಭಾತ್ಯಾಗ ಮಾಡಿದರು.

Similar News